×
Ad

ಶಾಲಾ ಮಕ್ಕಳಿಗಾಗಿ ಎಪಿಡಿ ಇಕೊ ಚಾರ್ಟ್ ಬಿಡುಗಡೆ

Update: 2016-06-20 15:09 IST

ಮಂಗಳೂರು, ಜೂ.20: ಆಂಟಿ ಪೊಲ್ಯೂಷನ್ ಡ್ರೈವ್ ಪ್ರತಿಷ್ಠಾನ (ಎಪಿಡಿ) ವತಿಯಿಂದ ಶಾಲಾ ಮಕ್ಕಳಿಗಾಗಿ ರೂಪಿಸಲಾದ ವಿಶಿಷ್ಟ ಪರಿಸರ ರಕ್ಷಣೆ ಮಾಹಿತಿ ಹೊಂದಿರುವ ಇಕೊ ಚಾರ್ಟ್ (ಪರಿಸರ ನಕಾಶೆ)ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿಡುಗಡೆ ಮಾಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಪುರಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ ಎಪಿಡಿ ಸಿದ್ಧಪಡಿಸಿದ ವಿಶಿಷ್ಟವಾದ ಆರು ಪರಿಸರ ನಕಾಶೆಗಳನ್ನು ಸಚಿವರು ಬಿಡುಗಡೆ ಮಾಡಿದರು.

ಪ್ರಮುಖ ಪರಿಸರ ಮಾಲಿನ್ಯ ನಿಯಂತ್ರಣ ವಿಧಾನಗಳ ಮಾಹಿತಿಯನ್ನು ಹೊಂದಿರುವ ನಕಾಶೆಗಳನ್ನು ನಗರದ ಚಿತ್ರಕಲಾಗಾರರಾದ ಜಾನ್ ಚಂದ್ರನ್ ಸೃಜನಾತ್ಮಕವಾಗಿ ರೂಪಿಸಿದ್ದು, ಶಾಲಾ ಮಕ್ಕಳಿಗೆ ಸುಲಭವಾಗಿ ಮನನವಾಗುವಂತೆ ಬಹುವರ್ಣದ ಚಿತ್ರಗಳೊಂದಿಗೆ ಸಿದ್ಧಪಡಿಸಲಾಗಿದೆ.

ಜಲ ಮಾಲಿನ್ಯ ನಿಯಂತ್ರಣ, ವಾಯು ಮಾಲಿನ್ಯ ನಿಯಂತ್ರಣ, ಮಣ್ಣಿನ ಮಾಲಿನ್ಯ ನಿಯಂತ್ರಣ, ಘನ ತ್ಯಾಜ್ಯ ವಿಲೇವಾರಿ, ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ಇ-ವೇಸ್ಟ್ ನಿರ್ವಹಣೆ ಕುರಿತ ಸುಂದರವಾದ ನಕಾಶೆಗಳನ್ನು ಶಾಲೆಗಳಿಗೆ ವಿತರಿಸಲಾಗುವುದು. ನಾಗರಿಕರಿಗೆ ತಮ್ಮ ಜೀವನ ಮಟ್ಟವನ್ನು ಉತ್ತಮಗೊಳಿಸಲು ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ತಿಳುವಳಿಕೆ ಅಗತ್ಯವಾಗಿದ್ದು, ಈ ಪರಿಸರ ಪೋಸ್ಟರುಗಳು ಮಕ್ಕಳಲ್ಲಿ ಮಾಲಿನ್ಯ ಹೆಚ್ಚಳವನ್ನು ನಿಯಂತ್ರಿಸುವ ಸ್ಪಂದನೆ ಮೂಡಿಸುವಲ್ಲಿ ಕೆಲಸ ಮಾಡಲಿವೆ ಎಂದು ಎಪಿಡಿ ಪ್ರತಿಷ್ಠಾನದ ಸ್ಥಾಪಕ ಅಬ್ದುಲ್ಲ ಎ.ರೆಹಮಾನ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಸಮಾರಂಭದಲ್ಲಿ ಶಾಸಕ ಜೆ.ಆರ್,ಲೋಬೊ, ಮೊಯ್ದೀನ್ ಬಾವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಎಪಿಡಿ ಪ್ರತಿಷ್ಠಾನದ ಪ್ರಧಾನ ಸಂಯೋಜಕ ಅರ್ಜುನ್ ರೈ, ರಕ್ಷಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಿ ಪೋಸ್ಟರುಗಳು 18 ಇಂಚು ಅಗಲ ಮತ್ತು 24 ಇಂಚು ಉದ್ದವಿದ್ದು, ಶಾಲಾ ಆವರಣ, ಲೈಬ್ರೆರಿ ಮತ್ತು ತರಗತಿಗಳಲ್ಲಿ ತೂಗು ಹಾಕಲು ಸೂಕ್ತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಪಿಡಿ ಪ್ರತಿಷ್ಠಾನದ ಮೊ.ಸಂ.:9740000008 ಮತ್ತು 0824-4270008ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News