×
Ad

ಕಾರಿಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ: ಕಾರು ಚಾಲಕ ಮೃತ್ಯು; ಇಬ್ಬರಿಗೆ ಗಾಯ

Update: 2016-06-20 17:23 IST

ಉಪ್ಪಿನಂಗಡಿ, ಜೂ.20: ಗ್ಯಾಸ್ ಟ್ಯಾಂಕರೊಂದು ಸ್ವಿಫ್ಟ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ಮಠ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಘಟನೆಯಿಂದ ಸಕಲೇಶಪುರ ಮೂಲದ ಹಾನಬಾಲು ನಿವಾಸಿ ಜಯದೇವ (58) ಎಂಬವರು ಮೃತಪಟ್ಟಿದ್ದಾರೆ. ಇವರ ಪತ್ನಿ ಸುಧಾ (42) ಎಂಬವರಿಗೆ ಗಂಭೀರ ಗಾಯವಾಗಿದ್ದು, ಪುತ್ರಿ ಅನ್ವಿತಾ (17) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಯದೇವ್ ಸೋಮವಾರ ಬೆಳಗ್ಗೆ ಹಾನಬಾಲುವಿನಿಂದ ಮಂಗಳೂರು ಕಡೆಗೆ ಬರುತ್ತಿದ್ದು, ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಅನಿಲ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿಬೆಳಗ್ಗೆ 9:30ರ ಸುಮಾರಿಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಠದ ಬಳಿ ಇವರಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಕಾರು ಚಲಾಯಿಸುತ್ತಿದ್ದ ಜಯದೇವ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಅವರ ಪತ್ನಿ ಸುಧಾರ ತಲೆಗೆ ಗಾಯಗಳಾಗಿವೆ. ಕಾರಿನ ಹಿಂಬದಿ ಸೀಟಿನಲ್ಲಿದ್ದ ಮಗಳು ಅನ್ವಿತಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಅನಾರೋಗ್ಯದ ಕಾರಣದಿಂದ ವೈದ್ಯಕೀಯ ತಪಾಸಣೆಗಾಗಿ ಸುಧಾರನ್ನು ಮಂಗಳೂರಿನ ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಈ ಅಪಘಾತ ನಡೆದಿದೆ.
 ಸಾರ್ವಜನಿಕರು ಅಪಘಾತವಾದ ಕೂಡಲೇ ಪರಿಹಾರ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಖಾಸಗಿ ವಾಹನವೊಂದರಲ್ಲಿ ಆಸ್ಪತ್ರೆಗೆ ಸಾಗಿಸಲು ನೆರವಾದರು. ಉಪ್ಪಿನಂಗಡಿಯಲ್ಲಿ ಗಾಯಾಳುಗಳನ್ನು ಆ್ಯಂಬುಲೆನ್ಸ್‌ಗೆ ಸ್ಥಳಾಂತರಿಸಲಾಯಿತು. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗ ಅಪಘಾತವಾದ ಮಠ ಪ್ರದೇಶವು ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಸುಮಾರು 5-6 ಕಿ.ಮೀ. ದೂರವಿದ್ದರೂ, ಈ ಭಾಗ ಪುತ್ತೂರು ಸಂಚಾರಿ ಠಾಣೆಗೆ ಸೇರಿದೆ. ಪುತ್ತೂರಿಗೆ ಇಲ್ಲಿಂದ ಸುಮಾರು 20 ಕಿ.ಮೀ. ದೂರವಿದೆ. ಆದ್ದರಿಂದ ಅವರು ಅಪಘಾತದ ಸ್ಥಳ ಮುಟ್ಟುವಾಗ ವಿಳಂಬವಾಗಿರುತ್ತದೆ. ಸೋಮವಾರ ಅಪಘಾತ ನಡೆದ ತಕ್ಷಣ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ, ಅಸ್ತವ್ಯಸ್ತಗೊಂಡಿದ್ದ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News