ಜೂ. 21ರಂದು ಬಿಷಪ್ ಡಾ. ಅಲೋಷಿಯಸ್ ಪೌಲ್ ಡಿಸೋಜರಿಗೆ ಪೌರಸನ್ಮಾನ

Update: 2016-06-20 12:47 GMT

ಮಂಗಳೂರು, ಜೂ.20: ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ.ಡಾ. ಅಲೋಶಿಯಸ್ ಪೌಲ್ ಡಿಸೋಜರ ಅಮೃತೋತ್ಸವದ ಪ್ರಯುಕ್ತ ನಗರದಲ್ಲಿ ಮಂಗಳವಾರ ಪೌರ ಸನ್ಮಾನವನ್ನು ಏರ್ಪಡಿಸಲಾಗಿದೆ.

ನಗರದ ಪುರಭವನದಲ್ಲಿ ಸಂಜೆ 3:30ಕ್ಕೆ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಮೇಯರ್ ಹರಿನಾಥ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ. ಶಾಂತಾರಾಮ್ ಶೆಟ್ಟಿ ಅಭಿನಂದಿಸುವರು. ಬೆಂಗಳೂರಿನ ಆರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್, ರಾಮಕೃಷ್ಣ ಮಠದ ಸ್ವಾಮೀಜಿ ಜಿತಕಾಮಾನಂದಜಿ, ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ವಿವಿಧ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರುಗಳು, ಸಂಸದ, ಸಚಿವರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಪ್ರಾರಂಭದಲ್ಲಿ ಸಮ್ಮಾನಿತರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುತ್ತದೆ.

ಬಿಷಪರ ಪೌರ ಸಮ್ಮಾನಕ್ಕೆ ಸಂಬಂಧಿಸಿ ಮೇಯರ್ ಎಂ. ಹರಿನಾಥ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಶಾಸಕ ಜೆ.ಆರ್. ಲೋಬೊ ಪ್ರಧಾನ ಸಂಚಾಲಕರಾಗಿದ್ದು, ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಕಾರ್ಯಕ್ರಮ ಸಂಚಾಲಕರಾಗಿದ್ದಾರೆ. ಎಂ.ಪಿ. ನೊರೋನ್ಹಾ ಕಾರ್ಯ ದರ್ಶಿಯಾಗಿದ್ದಾರೆ. 

ಬಿಷಪ್ ಸೇವೆಯ ವಿವರ

1941ರ ಜೂ. 21ರಂದು ಬಂಟ್ವಾಳ ತಾಲೂಕು ಅಗ್ರಾರ್ ಚರ್ಚ್‌ನ ಹೆಕ್ಕೊಟ್ಟು ಗ್ರಾಮದಲ್ಲಿ ಜನಿಸಿರುವ ಅಲೋಶಿಯಸ್ ಪೌಲ್ ಡಿಸೋಜ ಅವರು 1958 ರಲ್ಲಿ ಧಾರ್ಮಿಕ ಸೇವೆ ತರಬೇತಿ ಪಡೆಯಲು ಜಪ್ಪು ಸೈಂಟ್ ಜೋಸ್ೆ ಸೆಮಿನರಿಗೆ ಸೇರ್ಪಡೆಗೊಂಡಿದ್ದರು. 1966ರಲ್ಲಿ ಗುರುದೀಕ್ಷೆಯನ್ನು ಪಡೆದ ಅವರು 1970ರಲ್ಲಿ ಕುಲಶೇಖರ ಚರ್ಚ್‌ನಲ್ಲಿ ಸಹಾಯಕ ಗುರುಗಳಾಗಿ ಸೇವೆ ಆರಂಭಿಸಿದ್ದರು. ಬಳಿಕ ನಿಕಟ ಪೂರ್ವ ಬಿಷಪರ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು. ರೋಮ್‌ಗೆ ತೆರಳಿ ಕೆಥೋಲಿಕ್ ಧರ್ಮಸಭೆಯ ಕಾನೂನಿನ ವಿಷಯದಲ್ಲಿ ಡಾಕ್ಟರೆಟ್ ಪದವಿಯನ್ನು ಪಡೆದ ಅವರು 1976ರಲ್ಲಿ ಮಂಗಳೂರಿಗೆ ವಾಪಸಾಗಿ ಬಿಷಪರ ಕಾರ್ಯದರ್ಶಿ, ಛಾನ್ಸಲರ್ ಆಗಿ ನೇಮಕಗೊಂಡರು.

1985- 87ರಲ್ಲಿ ಗ್ಲಾಡ್‌ಸಂ ಹೋಂನ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 1987- 94ರ ಅವಧಿಯಲ್ಲಿ ಕಾಸ್ಸಿಯಾ ಚರ್ಚ್‌ಗುರು, ಧರ್ಮಪ್ರಾಂತದ ಛಾನ್ಸಿಲರ್, ನ್ಯಾಯಿಕ ಅಧಿಕಾರಿ, 1995ರಲ್ಲಿ ಜಪ್ಪು ಸೆಮಿನರಿಯ ರೆಕ್ಟರ್ ಆಗಿ ನೇಮಕಗೊಂಡರು. 1995 ನ. 1ರಂದು ಧರ್ಮಪ್ರಾಂತದ ಸಹಾಯಕ ಬಿಷಪ ರಾಗಿ ಮತ್ತು 1996 ಮೇ 15ರಂದು ಅಧಿಕೃತ ಬಿಷಪರಾಗಿ ನೇಮಕ ಗೊಂಡು ಅಧಿಕಾರ ಸ್ವೀಕರಿಸಿದ್ದರು.

ಕಾರ್ಯಕ್ರಮದ ನಿಮಿತ್ತ ನೆಹರೂ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News