ಚುನಾವಣಾ ಭರವಸೆಗಳನ್ನು ಶೀಘ್ರವೇ ಈಡೇರಿಸಲಾಗುವುದು: ಸಚಿವ ಇ.ಚಂದ್ರಶೇಖರನ್
ಮಂಜೇಶ್ವರ, ಜೂ.20: ಕೇರಳದ ಎಲ್‌ಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದೆಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದ್ದಾರೆ.
ಹೊಸಂಗಡಿಯಲ್ಲಿ ಎಲ್‌ಡಿಎಫ್ ಮಂಜೇಶ್ವರ ಮಂಡಲ ಸಮಿತಿಯ ವತಿಯಿಂದ ನಡೆದ ಪೌರ ಸನ್ಮಾನ ಕಾರ್ಯಕ್ರಮವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೇರಳದ ಜನತೆ ನೀಡಿದ ಅಧಿಕಾರವನ್ನು ಜನಸಾಮಾನ್ಯರ ಸೇವೆಗೈಯಲು ಸಿಕ್ಕ ಅವಕಾಶವೆಂದು ತಿಳಿದು ಅವರ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಸಚಿವರು ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಮಂಜೇಶ್ವರ ತಾಲೂಕಿನಲ್ಲಿ ಇರುವ ಭೂಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯನ್ನು ಚುರುಕುಗೊಳಿಸುವುದಾಗಿ ಸಚಿವರು ಭರವಸೆ ನೀಡಿದರು.
ಪೌರಸನ್ಮಾನ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುರ್ರಝಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು. ಎಲ್‌ಡಿಎಫ್ ಮುಖಂಡರಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್, ಡಾ.ವಿ.ಪಿ.ಪಿ.ಮುಸ್ತಫಾ, ಕೆ.ಆರ್.ಜಯಾನಂದ, ಬಿ.ವಿ.ರಾಜನ್, ಎ.ಅಬೂಬಕರ್, ಎಂ.ಸಂಜೀವ ಶೆಟ್ಟಿ, ಸುಬ್ಬಣ್ಣ ಆಳ್ವ, ಫಕ್ರುದ್ದೀನ್ ಹಾಜಿ, ಸಫರುಲ್ಲಾಖಾನ್, ರಘುದೇವ್ ಮಾಸ್ತರ್ ಮೊದಲಾದವರು ಮಾತನಾಡಿದರು.
ಎಡರಂಗದ ವತಿಯಿಂದ ಸಚಿವರಿಗೆ ಶಾಲು ಹೊದಿಸಿ ಸಮ್ಮಾನಿಸಲಾಯಿತು. ಸ್ವಾಗತ ಸಮಿತಿ ಸಂಚಾಲಕ ಜಯರಾಮ ಕೆ. ಸ್ವಾಗತಿಸಿ, ರಾಮಕೃಷ್ಣ ಕಡಂಬಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.