ಬೆಳ್ತಂಗಡಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಂದ ಪ್ರತಿಭಟನೆ
ಬೆಳ್ತಂಗಡಿ, ಜೂ.20: ಕಟ್ಟಡ ಕಾಮಿಕರಿಗೆ ಸವಲತ್ತುಗಳು ಕಳೆದ 4 ವರ್ಷಗಳಿಂದ ಸರಿಯಾಗಿ ಬರುತ್ತಿಲ್ಲ, ಆದರೆ ಕಲ್ಯಾಣ ಮಂಡಳಿಯ ಹಣವನ್ನು ಶಾಸಕರ ವಿದೇಶಿ ಪ್ರವಾಸ ಎಂದೆಲ್ಲಾ ಖರ್ಚು ಮಾಡಿ ಪೋಲು ಮಾಡಲಾಗುತ್ತಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಗಟನೆಯ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ನಡೆದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತಾಡುತ್ತಿದ್ದರು.
ಸಿಐಟಿಯುನ ಏಕಾಂಗಿ ಹೋರಾಟದಲ್ಲಿ ನಮ್ಮ ಜಿಲ್ಲೆಯಲ್ಲೇ ಪ್ರಾರಂಭವಾದ ಕಟ್ಟಡ ಕಾರ್ಮಿಕರ ಸಂಘಟನೆ ರಾಜ್ಯದಾದ್ಯಂತ ಬೆಳೆದು ಹೋರಾಟ ತೀವ್ರಗೊಂಡಾಗ ಈ ಕಾನೂನು ಸವಲತ್ತುಗಳು ಜಾರಿಯಾದವು ಎಂದರು. ಅದರೆ ಇಂದು ಸರಕಾರ ಮಂಡಳಿಯ ಹಣವನ್ನು ಪೋಲು ಮಾಡಲು ಯೋಚಿಸುತ್ತಿದೆಯೇ ಹೊರತು ಸವಲತ್ತುಗಳನ್ನು ನೀಡಲು ಮುತುವರ್ಜಿ ವಹಿಸುತ್ತಿಲ್ಲ. ಅದಕ್ಕಾಗಿ ಇಂದು ತಾಲೂಕು ಮಟ್ಟದಲ್ಲಿ ಪ್ರಾರಂಭವಾದ ಈ ಹೋರಾಟ ಜೂ.27ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹವಾಗಿ ನ್ಯಾಯ ಸಿಗುವ ತನಕ ಮುಂದುವರಿಯಲಿದೆ ಎಂದವರು ಹೇಳಿದರು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಸಂಘಟನೆಯ ಜಿಲ್ಲಾದ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್, ಇಂದು ಮಂತ್ರಿ ಪದವಿ ಸಿಕ್ಕಿಲ್ಲವೆಂದು ತಮ್ಮ ಬೆಂಬಲಿಗರಿಂದ ಬಸ್ಸು ಹೊತ್ತಿಸುವ ಶಾಸಕರು ಕಟ್ಟಡ ಕಾರ್ಮಿಕರ ಸವಲತ್ತುಗಳು ಯಾಕೆ ಬರುತ್ತಿಲ್ಲ ಎಂದು ಹೋರಾಡುತ್ತಿಲ್ಲ. ಕನಿಷ್ಠ ವಿಧಾನ ಸೌಧದಲ್ಲಿ ಈ 4 ವರ್ಷಗಳಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆಯೂ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ಆಯ್ಕೆಯಾದ ಈ ಶಾಸಕರು ಮಾತಾಡುತ್ತಿಲ್ಲ. ಹಿಂದು ಉದ್ದಾರಕರೆಂದು ಬೀಗುವ ಕೇಂದ್ರದ ಬಿಜೆಪಿ ಸರಕಾರ ಕಟ್ಟಡ ಕಾರ್ಮಿಕರಲ್ಲಿ ಕೂಡಾ ಹಿಂದುಗಳಿದ್ದಾರೆ ಎಂಬ ಬಗ್ಗೆ ಜಾಣಮರೆವು ತೋರುತ್ತಿದೆ. ಆದರೆ ನಾವು ನಮ್ಮ ಸವಲತ್ತುಗಳು ನಮಗೆ ಸಿಗುವ ತನಕ ಈ ಹೋರಾಟ ನಿಲ್ಲಿಸುವುದಿಲ್ಲ ಮಾತ್ರವಲ್ಲ, ಜಿಲ್ಲಾ ಮಟ್ಟದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದರು.
ಮನವಿಯನ್ನು ತಹಶೀಲ್ದಾರ್ ಮೂಲಕ ಸಹಾಯಕ ಕಾರ್ಮಿಕ ಆಯುಕ್ತರಿಗೆ ನೀಡಲಾಯಿತು.
ಸಂಘದ ತಾಲೂಕು ಕಾರ್ಯದರ್ಶಿ ವಸಂತ ನಡ, ಸಿಐಟಿಯು ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ಮೀನಾಕ್ಷಿ, ಜಯಶ್ರೀ, ಪುಷ್ಪಾ, ಇಂದಿರಾ, ರಾಮಚಂದ್ರ, ಡಿವೈಎಫ್‌ಐ ತಾಲೂಕು ಅಧ್ಯಕ್ಷ ಧನಂಜಯ ಗೌಡ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖಂಡ ಲೋಕೇಶ್ ಕುದ್ಯಾಡಿ, ದೇವಕಿ ಕಳೆಂಜ ವಂದಿಸಿದರು.