×
Ad

ದ.ಕ.: ಯೋಗ ದಿನಾಚರಣೆಯಲ್ಲಿ ಅಧಿಕಾರಿಗಳು, ರಾಜಕಾರಣಿಗಳು

Update: 2016-06-21 10:56 IST

ಮಂಗಳೂರು, ಜೂ.21: ಭಾರತ ಸರಕಾರದ ಆಯುಷ್ ಸಚಿವಾಲಯ ನಿರ್ದೇಶನದಲ್ಲಿ ಜಿಲ್ಲಾಡಳಿತ , ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಮಂಗಳಾ ಕ್ರೀಡಾಂಗಣದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ವಿದ್ಯಾರ್ಥಿಗಳು ವಿವಿಧ ಆಸನಗಳ ಮೂಲಕ ಗಮನ ಸೆಳೆದರು. ಬೆಳಗ್ಗೆ 9 ಗಂಟೆಯಿಂದ ಒಂದು ಗಂಟೆ ಕಾಲ ನಡೆದ ಯೋಗದಲ್ಲಿ ಸುಮಾರು 300 ಮಂದಿ ಭಾಗವಹಿಸಿ ವಿವಿಧ ಯೋಗ ಆಸನಗಳನ್ನು ನಿರ್ವಹಿಸಿದರು. ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನದಂತೆ ಭಾಗವಹಿಸಿದ್ದವರು ಯೋಗದ ವಿವಿಧ ಭಂಗಿಗಳನ್ನು ನಿರ್ವಹಿಸಿದರು. ಯೋಹ ದಿನಾಚರಣೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಒತ್ತಡದ ಜೀವನ ಶೈಲಿ ನಡುವೆ ಪರಿಪೂರ್ಣ ಆರೋಗ್ಯಕ್ಕಾಗಿ ಯೋಗ ಸಹಕಾರಿ ಎಂದರು. ಜಾತಿ ಧರ್ಮ ನೋಡದೆ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಯೋಗವನ್ನು ನಿರ್ವಹಿಸಬಹುದಾಗಿದೆ. ಯೋಗವು ಮಾನಸಿಕ ಒತ್ತಡವನ್ನು ನಿವಾರಿಸಿ ಉಲ್ಲಾಸವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಕಾರ್ಯನಿರ್ವಹಣಾಧಿಕಾರಿ ಪಿ.ಐ ಶ್ರೀವಿದ್ಯಾ, ಪೊಲೀಸ್ ಆಯುಕ್ತ ಚಂದ್ರಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಮನಪಾ ಆಯುಕ್ತ ಡಾ.ಗೋಪಾಲಕೃಷ್ಣ, ಜಿಲ್ಲಾ ಆಯುಷ್ ಅಧಿಕಾರಿ ದೇವದಾಸ್ ಮೊದಲಾದವರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಲಾಲ್‌ಬಾಗ್‌ನ ಆಫೀಸರ್ಸ್ ಕ್ಲಬ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಯೋಗ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತಾದರೂ, ಕೊನೆಯ ಕ್ಷಣದಲ್ಲಿ ಸ್ಥಳವನ್ನು ಮಂಗಳಾ ಕ್ರೀಡಾಂಗಣದ ಒಳಾಂಗಣ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ಒಂದು ಗಂಟೆ ತಡವಾಗಿ ಯೋಗ ಆರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News