×
Ad

ಕುಂದಾಪುರ: ಬಸ್-ಓಮಿನಿ ಢಿಕ್ಕಿ, 8 ಶಾಲಾ ಮಕ್ಕಳು ಮೃತ್ಯು

Update: 2016-06-21 11:42 IST

ಮಣಿಪಾಲ, ಜೂ.21: ಗಂಗೊಳ್ಳಿ ತ್ರಾಸಿ ಸಮೀಪದ ಮೊವಾಡಿ ಕ್ರಾಸ್‌ನಲ್ಲಿ ಇಂದು ಬೆಳಗ್ಗೆ 9:30ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮಡಿದ ಕಂದಮ್ಮಗಳ ಅಮ್ಮಂದಿರ ಹಾಗೂ ಬಂಧುಗಳ ರೋಧನ ಮುಗಿಲು ಮುಟ್ಟು ವಂತಿತ್ತು. ಈ ಘಟನೆಯಿಂದ ಇಡೀ ಪರಿಸರದಲ್ಲಿ ಸ್ಮಶಾನ ವೌನ ಆವರಿಸಿದೆ.

ಮಣಿಪಾಲ ಕೆಎಂಸಿಯ ಶವಾಗಾರದಲ್ಲಿ ಮಕ್ಕಳನ್ನು ಕಳೆದುಕೊಂಡಿದ್ದ ಕಟ್ ಬೆಲ್ತೂರಿನ ಲಾಯಿಡ್-ಮರಿನಾ ಡಿಸಿಲ್ವಾ ದಂಪತಿ, ತಾಯಂದಿರಾದ ರೀಟಾ ಓಲಿವೇರಾ, ರೇಶ್ಮಾ ಒಲಿವೇರಾ, ಡ್ಯಾಫ್ನಿ ಡಿಸೋಜ, ಶಾಂತಿ ಲೋಬೊ ಹಾಗೂ ಅವರ ಕುಟುಂಬಸ್ಥರು ತಮ್ಮ ಮಕ್ಕಳ ಮೃತದೇಹದ ಮುಂದೆ ರೋಧಿಸುವ ಚಿತ್ರಣ ಮನಕಲಕುವಂತಿತ್ತು.

ಹೆಚ್ಚಿನವರು ಸಂಬಂಧಿಕರು:

ಮೃತ ಹಾಗೂ ಗಾಯಗೊಂಡ ಮಕ್ಕಳೆಲ್ಲರು ಹೆಮ್ಮಾಡಿ ಗ್ರಾಮದ ಕಟ್‌ಬೆಲ್ತೂರು, ಮೂವತ್ತುಮುಡಿ ಆಸುಪಾಸಿನವರಾಗಿದ್ದು, ಇವರಲ್ಲಿ ಹೆಚ್ಚಿನವರು ಸಂಬಂಧಿಕರಾಗಿದ್ದಾರೆ.

ಮೃತ ಅನನ್ಯ ಮತ್ತು ನಿಖಿತಾರ ತಂದೆತಾಯಂದಿರಾದ ಲಾಯಿಡ್ ಹಾಗೂ ಮರಿನಾ ಡಿಸಿಲ್ವಾ ತಮಗಿದ್ದ ಇದ್ದ ಇಬ್ಬರು ಮಕ್ಕಳನ್ನೂ ಈ ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. ಲಾಯಿಡ್ ಕುಂದಾಪುರದಲ್ಲಿ ಹಳೆ ಬಸ್‌ನಿಲ್ದಾಣ ಸಮೀಪದ ಓಯಸಿಸ್ ಎಂಬ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರ ಪತ್ನಿ ಮರಿನಾ ಈ ಹಿಂದೆ ತ್ರಾಸಿಯ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಮೂವತ್ತುಮುಡಿಯ ಸ್ಟೀವನ್- ರೀಟಾ ಓಲಿವೇರಾ ದಂಪತಿಗೆ ವಿವಾಹ ವಾದ 5-6 ವರ್ಷಗಳವರೆಗೆ ಮಕ್ಕಳಾಗಿರಲಿಲ್ಲ. ಅದರ ನಂತರ ಹುಟ್ಟಿದ ಮಕ್ಕಳಾದ ಕ್ಲೆರಿಸ್ಸಾ ಮತ್ತು ಕೆಲಿಸ್ಟಾ ಇಬ್ಬರೂ ಕೂಡ ಈ ದುರ್ಘಟನೆಗೆ ಬಲಿಯಾಗಿದ್ದಾರೆ. ಸ್ಟೀವನ್ ಹಲವು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದಾರೆ.

ಆಲ್ವಿನ್- ರೇಶ್ಮಾ ಒಲಿವೇರಾ ದಂಪತಿಯ ಒಟ್ಟು ಮೂವರು ಮಕ್ಕಳಲ್ಲಿ ಅಲ್ವಿಟಾ ಮತ್ತು ಅನ್ಸಿಟಾ ಈ ದುರಂತರದಲ್ಲಿ ಅಸುನೀಗಿದ್ದಾರೆ. ಇವರಿಗೆ ಒಂದು ಗಂಡು ಮಗು ಇದೆ. ಆಲ್ವಿನ್ ವಿದೇಶದಲ್ಲಿ ದುಡಿಯುತ್ತಿದ್ದಾರೆ. ಆಲ್ವಿನ್ ಹಾಗೂ ಸ್ವೀವನ್ ಅಣ್ಣತಮ್ಮಂದಿರ ಮಕ್ಕಳಾಗಿದ್ದಾರೆ. ವಿನೋದಾ- ಡ್ಯಾಫ್ನಿ ಡಿಸೋಜರ ಓರ್ವ ಮಗ ಈ ಅಪಘಾತದಲ್ಲಿ ಮೃತ ಪಟ್ಟರೆ ಇನ್ನೊಬ್ಬ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿನೋದಾ ಕೂಡ ಗಲ್ಫ್ ಉದ್ಯೋಗಿಯಾಗಿದ್ದಾರೆ. ಹೆಮ್ಮಾಡಿಯ ವಿನೋದಾ- ಶಾಂತಿ ಲೋಬೊ ದಂಪತಿ ಇಬ್ಬರು ಮಕ್ಕಳಲ್ಲಿ ರೋಸ್ಟನ್ ಲೋಬೊನನ್ನು ಕಳೆದುಕೊಂಡಿದ್ದಾರೆ.

ಅಪಘಾತಕ್ಕೀಡಾದ ಓಮ್ನಿ ಕಾರಿನ ಚಾಲಕ ಮಾರ್ಟಿನ್ ಒಲಿವೇರಾ ಇಬ್ಬರು ಮಕ್ಕಳನ್ನು ಕಳೆದುಕೊಂಡ ಆಲ್ವಿನ್‌ನ ತಮ್ಮ. ಕಾರಿನಲ್ಲಿದ್ದ ಮಾರ್ಟಿನ್‌ರ ಮಗ ಮರಿಯೋ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಟಿನ್‌ರ ಮೊದಲ ಪತ್ನಿ 2010ರಲ್ಲಿ ಮಂಗ ಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಅದರ ನಂತರ ಅವರು ಫಿಲೋಮಿನ ಅವರನ್ನು ಎರಡನೆ ಮದುವೆಯಾಗಿದ್ದರು.

ಹೆಮ್ಮಾಡಿಗೆ ಬಸ್ಸೇ ಹೊಗಲ್ಲ:

ಆರು ವರ್ಷಗಳ ಹಿಂದೆ ಆರಂಭಗೊಂಡ ತ್ರಾಸಿ ಡಾನ್‌ಬಾಸ್ಕೋ ಶಾಲೆಯಲ್ಲಿ ಪ್ರಸ್ತುತ 250 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಹಲವು ಸ್ಕೂಲ್ ಬಸ್‌ಗಳಿವೆ. ಕುಂದಾಪುರದಿಂದ ಬೈಂದೂರು ವರೆಗೂ ಈ ಬಸ್‌ಗಳು ಹೋಗುತ್ತವೆ. ಆದರೆ ಈ ಅಪಘಾತದಲ್ಲಿ ಮೃತಪಟ್ಟ ವರ ಗ್ರಾಮವಾಗಿರುವ ಹೆಮ್ಮಾಡಿ, ಮೂವತ್ತುಮುಡಿಗೆ ಸರಿಯಾದ ರಸ್ತೆ ಇಲ್ಲದ ಕಾರಣ ಅಲ್ಲಿಗೆ ಶಾಲಾ ವಾಹನದ ವ್ಯವಸ್ಥೆಯನ್ನು ಶಾಲಾ ಆಡಳಿತ ಮಂಡಳಿ ಕಲ್ಪಿಸಿರಲಿಲ್ಲ.

ಈ ಗ್ರಾಮದವರಿಗೆ ರಾಷ್ಟ್ರೀಯ ಹೆದ್ದಾರಿಗೆ ಬರಬೇಕಾದರೆ ಒಂದೂವರೆ ಕಿ.ಮೀ. ನಡೆಯಬೇಕಾಗಿದೆ. ಇಲ್ಲಿನ ಕಿರಿದಾದ ರಸ್ತೆಯಲ್ಲಿ ಆಟೋ, ಕಾರು ಗಳು ಮಾತ್ರ ಸಂಚರಿಸಲು ಅವಕಾಶವಿದ್ದು, ದೊಡ್ಡ ವಾಹನಗಳು ಸಾಗುತ್ತಿರ ಲಿಲ್ಲ. ಹೀಗಾಗಿ ಇಲ್ಲಿಯವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಖಾಸಗಿ ವಾಹನಗಳನ್ನು ಅವಲಂಬಿಸಿಕೊಂಡಿದ್ದರು. ಹೀಗಾಗಿ ಅದೇ ಗ್ರಾಮದ ಮಾರ್ಟಿನ್ ಓಲಿವೇರಾ ಕಳೆದ ಎರಡು ವರ್ಷ ಗಳಿಂದ ತಮ್ಮ ಖಾಸಗಿ ಓಮ್ನಿ ಕಾರಿನಲ್ಲಿ ಇಲ್ಲಿನ ಮಕ್ಕಳನ್ನು ತೀರಾ ಕಡಿಮೆ ಹಣ ಪಡೆದು ಆಸುಪಾಸಿನ ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಬರುತ್ತಿದ್ದರು. ಇವರ ಪತ್ನಿ ಫಿಲೋಮಿನಾ ಕೂಡ ಅದೇ ಶಾಲೆಯ ಪ್ರೈಮರಿ ಶಿಕ್ಷಕಿಯಾಗಿದ್ದು, ಮಗ ಮರಿಯೋ ಎಲ್‌ಕೆಜಿಯ ವಿದ್ಯಾರ್ಥಿ.

‘ಮಾರ್ಟಿನ್ ಓಲಿವೇರಾ ಶಾಲಾ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ತಮ್ಮ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಿ ದ್ದರು. ಅವರದ್ದು ಇದೊಂದು ಸೇವೆ ಆಗಿತ್ತು. ಮೊವಾಡಿ ಕ್ರಾಸ್‌ನಲ್ಲಿ ಅವರು ಇಂಡಿಕೇಟರ್ ಹಾಗೂ ಹೆಲ್ಡ್‌ಲೈಟ್ ಹಾಕಿಕೊಂಡೆ ವಾಹನವನ್ನು ತಿರುಗಿಸಿ ದ್ದರು. ಆದರೆ ಅತಿವೇಗದಲ್ಲಿದ್ದ ಬಸ್ ನಿಲ್ಲಿಸುವ ಯಾವುದೇ ಪ್ರಯತ್ನ ಮಾಡದೆ ಕಾರಿಗೆ ಢಿಕ್ಕಿ ಹೊಡೆಯಿತು. ಜಿಲ್ಲಾಡಳಿತ ಬಸ್‌ಗಳ ವೇಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜೆರಾಲ್ಡ್ ಕ್ರಾಸ್ತಾ ತಿಳಿಸಿದ್ದಾರೆ.

ಈ ದುರಂತದಲ್ಲಿ ಕಾರು ಚಾಲಕನನ್ನು ಹೊಣೆಯಾಗಿಸುವುದು ಸರಿಯಲ್ಲ. ಇದರ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಯೇ ಹೊರಬೇಕು ಎಂದು ಗಂಗೊಳ್ಳಿ ಗ್ರಾಪಂ ಸದಸ್ಯ ಮಂಜುನಾಥ್ ಪೂಜಾರಿ ಹೇಳಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಇಂದು ಶಾಲೆಗೆ ರಜೆ ಘೋಷಿಸಲಾಗಿತ್ತು.

ಕಡ್ಡಾಯಗೊಳಿಸಲು ಅವಕಾಶವಿಲ್ಲ: ವಿಶಾಲ್

ಖಾಸಗಿ ಶಾಲಾ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ವಿಚಾರದಲ್ಲಿ ನಾವು ತಕ್ಷಣದ ಕ್ರಮ ತೆಗೆದುಕೊಳ್ಳಲು ಆಗಲ್ಲ. ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕಾಗಿದೆ. ಶಾಲೆಗಳಲ್ಲಿ ಕಡ್ಡಾಯವಾಗಿ ಶಾಲಾ ವಾಹನ ಕಲ್ಪಿಸುವಂತೆ ಮಾಡುವ ಕಾಯಿದೆ ನಮ್ಮಲ್ಲಿ ಇಲ್ಲ. ಹೀಗಾಗಿ ಶಾಲೆ ಗಳಿಗೆ ಇದನ್ನು ಕಡ್ಡಾಯಗೊಳಿಸಲು ಆಗುತ್ತಿಲ್ಲ. ಒಂದು ವಾರದೊಳಗೆ ಈ ಕುರಿತು ಎಸ್ಪಿ, ಆರ್‌ಟಿಓ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕರ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.

-ಡಾ.ಆರ್.ವಿಶಾಲ್, ಜಿಲ್ಲಾಧಿಕಾರಿ, ಉಡುಪಿ.


ಒಂದು ಕಾರಿನಲ್ಲಿ ಇಷ್ಟೊಂದು ಮಂದಿಯನ್ನು ಯಾಕೆ ತುಂಬಿಕೊಂಡು ಬಂದಿದ್ದಾರೆ. ಬಸ್ ಚಾಲಕನ ನಿರ್ಲಕ್ಷ ಹಾಗೂ ವೇಗದ ಕುರಿತು ಪರಿಶೀಲನೆ ನಡೆಸಲಾಗುವುದು. ಆರ್‌ಟಿಒ, ಡಿಸಿ ಜೊತೆ ಮಾತನಾಡಿ ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

-ಅಣ್ಣಾಮಲೈ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ

 ಈ ದುರಂತ ಸಂಭವಿಸಿರುವುದು ವಿಷಾದನೀಯ. ಈ ಹಿಂದೆ ಹಲವು ಬಾರಿ ಶಿಕ್ಷಣಾಧಿಕಾರಿ, ಶಾಲಾ ಮುಖ್ಯಸ್ಥರ ಸಭೆ ನಡೆಸಿ ಮಕ್ಕಳ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದೇವೆ. ಆದರೂ ಈಗ ಹಳದಿ ಬಣ್ಣ ಹಚ್ಚಿಲ್ಲದ ಖಾಸಗಿ ಕಾರಿನಲ್ಲಿ 17 ಮಕ್ಕಳನ್ನು ತುಂಬಿಸಿಕೊಂಡು ಹೋಗುವ ಮೂಲಕ ತಪ್ಪು ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಲಾಗುವುದು. ಮಕ್ಕಳ ಕುಟುಂಬಗಳಿಗೆ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು.

ಗೋಪಾಲ ಪೂಜಾರಿ, ಶಾಸಕರು, ಬೈಂದೂರು

ಸಚಿವ ಪ್ರಮೋದ್ ಸಂತಾಪ

ತ್ರಾಸಿಯಲ್ಲಿ ಸಂಭವಿಸಿದ ಶಾಲಾ ವಾಹನ ಅಪಘಾತದ ಬಗ್ಗೆ ರಾಜ್ಯದ ನೂತನ ಮೀನುಗಾರಿಕೆ ಹಾಗೂ ಯುವಜನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಮೋದ್ ಸಚಿವರಾದ ಬಳಿಕ ಜಿಲ್ಲೆಗೆ ಪ್ರಥಮವಾಗಿ ಭೇಟಿ ನೀಡುತ್ತಿರುವ ಪ್ರಯುಕ್ತ ಹಮ್ಮಿಕೊಳ್ಳಲಾದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಈ ಘಟನೆಯ ಸಂತಾಪ ಸೂಚಕವಾಗಿ ರದ್ದುಗೊಳಿಸುವಂತೆ ಶಾಸಕರು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News