×
Ad

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ, ವಿವಿಧ ಕ್ಲಬ್ ಗಳ ಉದ್ಘಾಟನೆ

Update: 2016-06-21 13:54 IST

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಸಮಾರಂಭವು ಬೆಥನಿ ರಜತ ಜುಬಿಲಿ ಸಭಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾ  ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ದೀಪ ಪ್ರಜ್ವಲನಗೊಳಿಸುವ ಮೂಲಕ ವಿವಿಧ ಸಂಘಗಳ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವನ ಮಹೋತ್ಸವ ಕೇವಲ ಗಿಡ ನೆಡುವುದಕ್ಕೆ ಮಾತ್ರ ಸೀಮಿತವಾಗಿರದೆ ಅರಣ್ಯ ಸಂಪತ್ತನ್ನು ಬೆಳೆಸಿ ರಕ್ಷಿಸುವ ಮೂಲಕ ಹವಾಮಾನ ವೈಪರೀತ್ಯವನ್ನು ಕಾಪಾಡುವಲ್ಲಿ ನಾವೆಲ್ಲಾ ಬದ್ಧರಾಗಬೇಕು. ದೇಶೀಯ ಗಿಡಗಳನ್ನು ನೆಟ್ಟು ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕೆಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ರೆ|ಫಾ| ಲಿಜೋ ಜಾರ್ಜ್ ಓಐಸಿರವರು ಪ್ರಸ್ತುತ ದಿನಗಳಲ್ಲಿ ಮರ ಗಿಡಗಳೇ ಮನುಷ್ಯನ ಮೂಲ ಸಂಪತ್ತು, ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿರುವ ವಿವಿಧ ಸಂಘಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯಾಗಿದೆ. ಅದರ ಅವಕಾಶಗಳನ್ನು ಪಡೆಯುವಂತೆ ತಿಳಿಸಿದರು.

ಸಂಸ್ಥೆಯ ಸಂಚಾಲಕ ರೆ|ಫಾ| ಸತ್ಯನ್ ತೋಮಸ್ ಓಐಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ವನಮಹೋತ್ಸವ ಎನ್ನುವುದು, ಪ್ರತಿಯೊಬ್ಬ ವ್ಯಕ್ತಿಯ ಜೀವಕ್ಕೆ ಸಂಬಂಧಪಟ್ಟಿದು. ಇದು ಒಂದು ಕೇವಲ ಸಾಂಕೇತಿಕ ಕಾರ್ಯಕ್ರಮವಾಗಿರದೆ ಮನಃಪೂರ್ವಕವಾಗಿ ಗಿಡ ಮರಗಳನ್ನು ನೆಟ್ಟು ಅರಣ್ಯ ಸಂರಕ್ಷಣೆಯಲ್ಲಿ ಭಾಗಿಯಾಗಿ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಕಂಕಣ ಬದ್ಧರಾಗಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರೇರಣೆಯೆಂಬಂತೆ ಮಾದರಿಯಾಗಿರುವ ರಾಜಸ್ಥಾನದ ಗ್ರಾಮವೊಂದರ ಜನರು ಮರುಭೂಮಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸಮತೋಲನವನ್ನು ಕಾಪಾಡುವುದು ಸಾಧ್ಯ ಎಂಬ ಅಂಶವನ್ನು ತೋರಿಸಿಕೊಟ್ಟಿದ್ದಾರೆ. ಅಂತೆಯೇ ನಾವು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.

ಬೆಥನಿ ಸಂಸ್ಥೆಯ ಕೋಶಾಧಿಕಾರಿ ರೆ|ಫಾ| ಫ್ರಾನ್ಸಿಸ್ ತೆಕ್ಕೆಪೊಕಳಂ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದರು.  ಕುಮಾರಿ ಮಹಿಮ ಅತಿಥಿಗಳನ್ನು ಸ್ವಾಗತಿಸಿದರು.  ಆಶಿಕಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಂಘಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳು ತಂದ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News