ಇಂಗ್ಲೆಂಡ್, ವೇಲ್ಸ್‌ಗೆ ನಾಕೌಟ್ ಟಿಕೆಟ್
ಪ್ಯಾರಿಸ್, ಜೂ.21: ಇಂಗ್ಲೆಂಡ್ ಹಾಗೂ ವೇಲ್ಸ್ ತಂಡಗಳು ಯುರೋ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ 16ರ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ.
ಸೋಮವಾರ ರಾತ್ರಿ ಇಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸ್ಲೋವಾಕಿಯಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತು. ‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ವೇಲ್ಸ್ ತಂಡ ರಶ್ಯವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು. ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ವೇಲ್ಸ್ ನಾಕೌಟ್ ಹಂತ ತಲುಪಿತು.
ಇಂಗ್ಲೆಂಡ್ ತಂಡ ಸ್ಲೋವಾಕಿಯಾ ವಿರುದ್ಧ ಹಲವು ಬಾರಿ ಅವಕಾಶ ಗಿಟ್ಟಿಸಿಕೊಂಡರೂ ಗೋಲು ಬಾರಿಸಲು ವಿಫಲವಾಯಿತು. ಇಂಗ್ಲೆಂಡ್ ವಿರುದ್ಧ ಈ ಹಿಂದೆ ಆಡಿದ್ದ ಮೂರೂ ಪಂದ್ಯಗಳನ್ನು ಸೋತಿದ್ದ ಸ್ಲೋವಾಕಿಯ ತಂಡ ಯುರೋ ಕಪ್‌ನಲ್ಲಿ ರಕ್ಷಣಾತ್ಮಕವಾಗಿ ಆಡಿ ಗಮನ ಸೆಳೆಯಿತು.
ಇಂಗ್ಲೆಂಡ್ ತಂಡಕ್ಕೆ ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಅಂತಿಮ 16ರ ಸುತ್ತಿನಲ್ಲಿ ಬಲಿಷ್ಠ ತಂಡವನ್ನು ಎದುರಿಸುವುದರಿಂದ ಬಚಾವಾಗಲು ಸ್ಲೋವಾಕಿಯಾ ತಂಡದ ವಿರುದ್ಧ ಗೆಲ್ಲಲೇಬೇಕಾಗಿತ್ತು. ಆರು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿತ್ತು.
ಮಿಂಚಿದ ವೇಲ್ಸ್‌ಗೆ ಅಗ್ರ ಸ್ಥಾನ, ನಿರಾಸೆ ಮೂಡಿಸಿದ ರಶ್ಯ
1958ರ ನಂತರ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡಿದ ವೇಲ್ಸ್ ತಂಡ ರಶ್ಯ ತಂಡವನ್ನು ಟೂರ್ನಿಯಿಂದ ಹೊರ ಹಾಕಿ ಆರು ಅಂಕವನ್ನು ಗಳಿಸಿತು. ಬಿ ಗುಂಪಿನಲ್ಲಿ ಬ್ರಿಟನ್‌ನ್ನು ಹಿಂದಿಕ್ಕಿ ಪ್ರಮುಖ ಟೂರ್ನಿಯಲ್ಲಿ ಎರಡನೆ ಬಾರಿ ಅಂತಿಮ 16ರ ಸುತ್ತಿಗೆ ತಲುಪಿತು.
11ನೆ ನಿಮಿಷದಲ್ಲಿ ಆ್ಯರೊನ್ ರಾಮ್ಸೆ 1-0 ಮುನ್ನಡೆ ಒದಗಿಸಿಕೊಟ್ಟರು. 20ನೆ ನಿಮಿಷದಲ್ಲಿ ಗೋಲು ಬಾರಿಸಿದ ನೈಲ್ ಟೇಲರ್ ಅವರು ವೇಲ್ಸ್ ಮುನ್ನಡೆಯನ್ನು 2-0ಗೆ ಏರಿಸಿದರು. ಕಳೆದ ತಿಂಗಳು ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಜಯಿಸಲು ನೆರವಾಗಿದ್ದ ಗೆರಾತ್ ಬಾಲೆ 67ನೆ ನಿಮಿಷದಲ್ಲಿ ಗೋಲುಬಾರಿಸಿ ವೇಲ್ಸ್‌ಗೆ 3-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ತಂದುಕೊಟ್ಟರು.
ವೇಲ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಸೋತಿರುವ ರಶ್ಯ 2016ರ ಯುರೋ ಕಪ್‌ನಲ್ಲಿ ಕೇವಲ ಒಂದು ಅಂಕವನ್ನು ಗಳಿಸಿದೆ. ನಿರಾಶಾದಾಯಕ ಪ್ರದರ್ಶನದೊಂದಿಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.
ಇನ್ನೆರಡು ವರ್ಷಗಳಲ್ಲಿ ತನ್ನದೇ ಆತಿಥ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಲಿದೆ. ತಂಡದಲ್ಲಿ ಹೆಚ್ಚುದಿನ ಇರಲಾರೆ ಎಂದು ರಶ್ಯದ ಕೋಚ್ ಲಿಯೊನಾಲ್ಡ್ ಸುಳಿವು ನೀಡಿದ್ದಾರೆ