×
Ad

ಮುಸ್ಲಿಮರು ಮತ್ತು ಇಸ್ಲಾಮ್ ವಿರುದ್ಧ ದ್ವೇಷ ಹರಡುವುದು ಈಗ ಮಲ್ಟಿ ಮಿಲಿಯನ್ ಡಾಲರ್ ಉದ್ಯಮ !

Update: 2016-06-21 16:22 IST

ವಾಶಿಂಗ್ಟನ್, ಜೂ. 21: ಅಮೆರಿಕನ್ ಮುಸ್ಲಿಮರು ಮತ್ತು ಇಸ್ಲಾಮ್ ವಿರುದ್ಧ ದ್ವೇಷ ಹುಟ್ಟಿಸುವುದು ಈಗ ಬಹುಕೋಟಿ ಡಾಲರ್ ಉದ್ಯಮವಾಗಿದೆ ಎಂದು ಸೋಮವಾರ ಬಿಡುಗಡೆಗೊಂಡ ವರದಿಯೊಂದು ತಿಳಿಸಿದೆ.

ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕದಲ್ಲಿ ಇಸ್ಲಾಮೊಫೋಬಿಯ (ಇಸ್ಲಾಮ್ ಬಗ್ಗೆ ಹೆದರಿಕೆ)ಕ್ಕೆ ದೇಣಿಗೆ ನೀಡುತ್ತಿರುವ 74 ಗುಂಪುಗಳನ್ನು ವರದಿ ಹೆಸರಿಸಿದೆ.

ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ (ಕೇರ್) ಮತ್ತು ಬರ್ಕ್‌ಲಿಯಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ರೇಸ್ ಆ್ಯಂಡ್ ಜಂಡರ್ ವರದಿಯನ್ನು ಸಿದ್ಧಪಡಿಸಿವೆ.

ಈ ಪೈಕಿ 33 ಗುಂಪುಗಳ ಪ್ರಾಥಮಿಕ ಉದ್ದೇಶ ಇಸ್ಲಾಮ್ ಮತ್ತು ಮುಸ್ಲಿಮರ ವಿರದ್ಧ ಪೂರ್ವಾಗ್ರಹ ಮತ್ತು ದ್ವೇಷ ಬೆಳೆಸುವುದಾಗಿದೆ ಎಂದು ಅದು ಹೇಳುತ್ತದೆ.

ಮುಸ್ಲಿಮರ ವಿರುದ್ಧದ ದ್ವೇಷ ಅಭಿಯಾನದಲ್ಲಿ ಅಬ್‌ಸ್ಟ್ರಾಕ್ಷನ್ ಫಂಡ್, ಕ್ಲಾರಿಯನ್ ಪ್ರಾಜೆಕ್ಟ್, ಡೇವಿಡ್ ಹೊರೊವಿಝ್ ಫ್ರೀಡಂ ಸೆಂಟರ್, ಮಿಡ್‌ಲ್ ಈಸ್ಟ್ ಫೋರಂ, ಅಮೆರಿಕನ್ ಫ್ರೀಡಂ ಲಾ ಸೆಂಟರ್, ಸೆಂಟರ್ ಫಾರ್ ಸೆಕ್ಯುರಿಟಿ ಪಾಲಿಸಿ, ಇನ್‌ವೆಸ್ಟಿಗೇಟಿವ್ ಪ್ರಾಜೆಕ್ಟ್ ಆನ್ ಟೆರರಿಸಂ, ಜಿಹಾದ್ ವಾಚ್ ಮತ್ತು ಆ್ಯಕ್ಟ್!ಫಾರ್ ಅಮೆರಿಕ ಮುಂಚೂಣಿಯಲ್ಲಿವೆ.

2008 ಮತ್ತು 2013ರ ಅವಧಿಯಲ್ಲಿ ಈ ಗುಂಪುಗಳಿಗೆ ಸುಮಾರು 206 ಮಿಲಿಯ ಡಾಲರ್ (ಸುಮಾರು 1,374 ಕೋಟಿ ರೂಪಾಯಿ) ಪಾವತಿಯಾಗಿತ್ತು ಎಂದು ವರದಿ ತಿಳಿಸಿದೆ.

ವರದಿಯ ಲೇಖಕಿ ಹಾಗೂ ಕೇರ್‌ನ ಇಸ್ಲಾಮೊಫೋಬಿಯದ ಮೇಲೆ ನಿಗಾ ಇಡುವ ಹಾಗೂ ಹೋರಾಡುವ ವಿಭಾಗದ ನಿರ್ದೇಶಕಿ ಕೋರಿ ಸೇಲರ್ ಹೀಗೆ ಹೇಳುತ್ತಾರೆ: ‘‘ಈ ಗುಂಪುಗಳು ಪೋಷಿಸುತ್ತಿರುವ ಹಾಗೂ ಹಣ ಖರ್ಚು ಮಾಡುತ್ತಿರುವ ದ್ವೇಷದ ವಾಸ್ತವಿಕ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ದೇಶಾದ್ಯಂತದಲ್ಲಿರುವ ಮಸೀದಿಗಳ ಮೇಲೆ ದಾಳಿಯಾಗುತ್ತಿದೆ ಹಾಗೂ ನೂತನ ಕಾನೂನುಗಳು ಅಮೆರಿಕದಲ್ಲಿರುವ ಮುಸ್ಲಿಮರ ವಿರುದ್ಧ ತಾರತಮ್ಯ ತೋರಿಸುತ್ತಿವೆ.’’

ವಾಶಿಂಗ್ಟನ್‌ನ ಸೆಂಟರ್ ಫಾರ್ ಸೆಕ್ಯುರಿಟಿ ಪಾಲಿಸಿ ಮತ್ತು ಆ್ಯಕ್ಟ್!ಫಾರ್ ಅಮೆರಿಕ ಗುಂಪುಗಳು ಹೆಚ್ಚಿನ ಪ್ರಭಾವವನ್ನು ಬೀರಿವೆ. ಯಾಕೆಂದರೆ, ಅವುಗಳು ತಮ್ಮ ಮುಸ್ಲಿಮ್ ವಿರೋಧಿ ಭಾವಾವೇಶಗಳನ್ನು ತಮ್ಮ ಹಿಂದಿನ ಸೀಮಿತ ಅನುಯಾಯಿ ವರ್ಗಕ್ಕಲ್ಲದೆ ಇತರರಿಗೂ ತಲುಪಿಸಲು ಪ್ರಯತ್ನಿಸುತ್ತಿವೆ.

 ಪಟ್ಟಿಯಲ್ಲಿರುವ ಎರಡು ಗುಂಪುಗಳಾದ ಸೆಂಟರ್ ಫಾರ್ ಸೆಕ್ಯುರಿಟಿ ಪಾಲಿಸಿ ಮತ್ತು ಡೇವಿಡ್ ಹೊರೊವಿಝ್ ಫ್ರೀಡಂ ಸೆಂಟರ್ ಅಲಬಾಮ ಸೆನೆಟರ್ ಜೆಫ್ ಸೆಶನ್ಸ್‌ರಿಗೆ ಮಾನ್ಯತೆ ನೀಡಿವೆ. ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ಜೆಫ್ ಸೆಶನ್ಸ್ ಸಂಭಾವ್ಯ ಉಪಾಧ್ಯಕ್ಷ ಆಯ್ಕೆಯೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News