×
Ad

ಉಳ್ಳಾಲ ನಗರಸಭೆಗೆ ಮುತ್ತಿಗೆ ಹಾಕಿದ ನಾಗರಿಕರು

Update: 2016-06-21 18:39 IST

ಉಳ್ಳಾಲ, ಜೂ.21: ಅಲೇಕಳ, ಮಾರ್ಗತಲೆ ರಸ್ತೆಯು ಸುಮಾರು ಒಂದೂವರೆ ವರ್ಷದಿಂದ ಕೆಟ್ಟುಹೋಗಿ ಬೃಹತ್ ಹೊಂಡಗುಂಡಿಗಳಿಂದ ಕೂಡಿದ್ದು, ಶಾಲಾ ಮಕ್ಕಳು,ಜನಸಾಮಾನ್ಯರು ನಡೆದಾಡದ ಪರಿಸ್ಥಿತಿ ಬಂದೊದಗಿದ್ದರೂ ಜನಪ್ರತಿನಿಧಿಗಳು ಕಣ್ಣಿಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಉಳ್ಳಾಲ ನಗರಸಭೆ ವ್ಯಾಪ್ತಿಯ ಅಳೇಕಳ, ಪಾಂಡಲ್ ಪಕ್ಕ, ಮಾರ್ಗತ್ತಲೆ, ಉಳಿಯ ವಾರ್ಡ್‌ನ ರಸ್ತೆಯ ಕಾಂಕ್ರಿಟೀಕರಣ ಮತ್ತು ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಮಳೆಗಾಲ ಶುರುವಾಗಿದ್ದು ಒಂದೂವರೆ ವರ್ಷದಿಂದ ನಾಗರಿಕರು ಎದುರಿಸುತ್ತಿರುವ ರಸ್ತೆ ಸಮಸ್ಯೆಗೆ ಈಗ ಮಳೆಯ ಅಡ್ಡಿಯ ಕುಂಟುನೆಪ ಹೇಳಿ ಕಾಂಕ್ರೀಟ್ ನಡೆಸಲು ಕಷ್ಟ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದರು.

ಜನವಾದಿ ಮಹಿಳಾ ಸಂಘದ ಮುಖಂಡೆ ಪದ್ಮಾವತಿ ಶೆಟ್ಟಿ ಮಾತನಾಡಿ ಕ್ಷೇತ್ರಕ್ಕೆ ಸಮರ್ಪಕವಾದ ಚರಂಡಿ ವ್ಯವಸ್ಥೆಗಳನ್ನು ಕಲ್ಪಿಸದೆ ತ್ಯಾಜ್ಯ ನೀರೆಲ್ಲವೂ ರಸ್ತೆಯಲ್ಲೇ ಹರಿಯುವಂತಾಗಿದ್ದು ಸೊಳ್ಳೆ ಉತ್ಪಾದನಾ ಕೇಂದ್ರಗಳು ನಿರ್ಮಾಣಗೊಂಡಿದ್ದರೂ ನಗರಸಭಾ ಆರೋಗ್ಯಾಧಿಕಾರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ನಗರ ಪೌರಾಯುಕ್ತೆಗೆ ವಾರದ ಗಡುವು

ಡಿವೈಎಫ್‌ಐ ಮುಖಂಡ ಜೀವನ್ ರಾಜ್ ಕುತ್ತಾರು ಸಂತ್ರಸ್ತರ ಮನವಿಯನ್ನು ಪೌರಾಯುಕ್ತೆ ರೂಪಾ ಟಿ.ಶೆಟ್ಟಿಗೆ ನೀಡಿ, ಒಂದು ವಾರದಲ್ಲಿ ಸಂತ್ರಸ್ತ ನಾಗರಿಕರು ಅಧಿಕಾರಿಗಳು ಮತ್ತು ಕೌನ್ಸಿಲರ್‌ಗಳ ಸಭೆ ಕರೆದು ನಿರ್ಣಯ ತೆಗೆದುಕೊಳ್ಳದಿದ್ದಲ್ಲಿ ಪೌರಾಯುಕ್ತೆಯ ಮನೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಸಿಐಟಿಯು ಮುಖಂಡರಾದ ಜಯಂತ್ ನಾಯ್ಕ,ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಎಸ್‌ಎಫ್‌ಐ ಮುಖಂಡ ಹಂಝ ಕಿನ್ಯಾ, ಅಳೇಕಳ ಡಿವೈಎಫ್‌ಐ ಘಟಕದ ಅಧ್ಯಕ್ಷ ಅಶ್ಪಕ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News