ಚೀನಾದಲ್ಲಿ ಮೌತ್ ಫ್ರೆಶ್ನರ್ ಆಗಿ ದ.ಕ. ಜಿಲ್ಲೆಯ ಅಡಿಕೆ!

Update: 2016-06-21 16:27 GMT

ಮಂಗಳೂರು, ಜೂ.21: ಮೌತ್ ಫ್ರೆಶ್ನರ್ ಆಗಿ ದ.ಕ. ಜಿಲ್ಲೆಯ ಅಡಿಕೆಯನ್ನು ಬಳಕೆ ಮಾಡುವ ಕುರಿತಂತೆ ಕಳೆದ ಎರಡು ವರ್ಷಗಳಿಂದ ಕ್ಯಾಂಪ್ಕೊ ಸಂಸ್ಥೆ ಹಾಗೂ ಚೀನಾ ಮಧ್ಯೆ ನಡೆಯುತ್ತಿರುವ ಮಾತುಕತೆ ಹಾಗೂ ಭೇಟಿಯ ಫಲವಾಗಿ ಆಗಸ್ಟ್ ವೇಳೆಗೆ ಎರಡು ಮೆಟ್ರಿಕ್ ಟನ್ ಅಡಿಕೆ ರಫ್ತು ಮಾಡಲು ತೀರ್ಮಾನಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.

ನಗರದ ಕ್ಯಾಂಪ್ಕೋ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಚೀನಾಕ್ಕೆ ತೆರಳಿ ಅಲ್ಲಿಯ ಕಿಂಗ್ ಆಫ್ ಟೇಸ್ಟ್ ಕಂಪೆನಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಜೊತೆ ಕ್ಯಾಂಪ್ಕೊ ಸಂಸ್ಥೆ ಒಪ್ಪಂದ ಮಾಡಿದಂತೆ ಪ್ರಾಯೋಗಿಕವಾಗಿ ಅಡಿಕೆ ರಫ್ತು ಮಾಡಲಾಗುವುದು ಎಂದರು.

ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಚೀನಾದ ಹೈನಾನ್ ಪ್ರಾಂತ್ಯದಲ್ಲಿ ವರ್ಷಕ್ಕೆ 1.22 ಲಕ್ಷ ಮೆಟ್ರಿಕ್ ಟನ್ ಅಡಿಕೆ ಬೆಳೆಸಲಾಗುತ್ತಿದೆ. ಅಲ್ಲಿ ಸುಮಾರು 20ರಷ್ಟು ಅಡಿಕೆಯ ಮೌತ್ ಫ್ರೆಶ್ನರ್ ತಯಾರಿಸುವ ಕಂಪೆನಿಗಳಿದ್ದು, ಅದಕ್ಕೆ ಬಹಳಷ್ಟು ಬೇಡಿಕೆ ಇದೆ ಎಂದರು.

ಚೀನಾ ದೇಶದಿಂದ ಮುಂದಿನ ದಿನಗಳಲ್ಲಿ ಭಾರತ ಅಡಿಕೆಗೆ ಭಾರಿ ಬೇಡಿಕೆ ಬರಬಹುದು. ನಾವು ರಫ್ತು ಮಾಡುವ ಅಡಿಕೆಯ ಗುಣಮಟ್ಟ ಸಂಸ್ಕರಣೆ ಮತ್ತು ಪರಿಷ್ಕರಣೆ ಬಗ್ಗೆ ಕಿಂಗ್ ಆಫ್ ಟೇಸ್ಟ್ ಕಂಪೆನಿಯ ತಜ್ಞರು ಜುಲೈನಲ್ಲಿ ಭಾರತಕ್ಕೆ ಬರಲಿದ್ದಾರೆ. ಚೀನಾದ ಬೇರೆ ಕಂಪೆನಿಗಳು ಕೂಡಾ ರ್ತು ಮಾಡಿಕೊಳ್ಳುವ ಆಸಕ್ತಿ ತೋರಿಸಿವೆ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜ್ಯದ ಆಯ್ದ ಅಡಿಕೆೆ ಬೆಳೆಗಾರರನ್ನು ಚೀನಾದ ಅಡಿಕೆ ಬೆಳೆಯುವ ಪ್ರದೇಶಗಳಿಗೆ ಕಳುಹಿಸಿ ಅಡಿಕೆ ಸಂಸ್ಕರಣೆ ಮತ್ತು ಪರಿಷ್ಕರಣೆ ಬಗ್ಗೆ ಅಧ್ಯಯನ ಮಾಡಲು ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಅನೇಕ ಸಹಕಾರಿ ಸಂಘಗಳಿದ್ದು, ಅವುಗಳ ಮೂಲಕ ನಮ್ಮ ಊರಿನ ಪ್ರಗತಿಪರ ಕೃಷಿಕರನ್ನು ಚೀನಾ ದೇಶಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಲು ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.

ಕ್ಯಾಂಪ್ಕೊ ಉಪಾಧ್ಯಕ್ಷ ಶಂನಾ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಮಹಾಪ್ರಬಂಧಕ ಎಚ್.ಎನ್.ಕೃಷ್ಣ ಕುಮಾರ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ.ಎಂ.ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಗುಟ್ಕಾಕ್ಕೆ ಪರ್ಯಾಯವಾಗಿ ಮೌತ್ ಪ್ರೆಶ್ನರ್ ಬಳಕೆ ಪ್ರಯತ್ನ

ಗುಟ್ಕಾಕ್ಕೆ ಪರ್ಯಾಯವಾಗಿ ಚೀನಾದಲ್ಲಿ ತೀರಾ ಬೇಡಿಕೆಯಿರುವ ವೌತ್ ಪ್ರೆಶ್ನರನ್ನು ಭಾರತದಲ್ಲಿ ಬಳಕೆ ಮಾಡುವ ಪ್ರಯತ್ನವನ್ನು ಮಾಡಬಹುದಾಗಿದೆ. ಎಳೆ ಅಡಿಕೆಯನ್ನು ಬೇಯಿಸಿ ತಯಾರಿಸಲಾಗುವ ಈ ವೌತ್ ಫ್ರೆಶ್ನರ್‌ನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳಿರುವ ಬಗ್ಗೆ ಕಾಂಪೋಡಿಯಂ ಆಪ್ ಮೆಟಿರಿಯ ಮೆಡಿಕಾ ಎಂಬ 6 ಸಂಪುಟದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮಾತ್ರವಲ್ಲದೆ ಚೀನಾದ ಈ ಪುಸ್ತಕದಲ್ಲಿ ಅಡಿಕೆಯ ಔಷಧೀಯ ಗುಣಗಳ ಕುರಿತಂತೆ 18,000 ಪುಟಗಳ ಪುಸ್ತಕದ ನಾಲ್ಕನೆ ಸಂಪುಟದಲ್ಲಿ ವಿಸ್ತೃತವಾಗಿ ತಿಳಿಸಲಾಗಿದ್ದು, ಈ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು.


  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News