ಸಾಫ್ಟ್‌ಬ್ಯಾಂಕ್ ಸಿಒಒ ನಿಕೇಶ್ ಅರೋರ ರಾಜೀನಾಮೆ
ಟೋಕಿಯೊ, ಜೂ. 21: ಜಪಾನ್‌ನ ಸಾಫ್ಟ್‌ಬ್ಯಾಂಕ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯಾಚರಣಾಧಿಕಾರಿ (ಸಿಒಒ) ಭಾರತ ಸಂಜಾತ ನಿಕೇಶ್ ಅರೋರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಜೂನ್ 22ರಿಂದ ಜಾರಿಗೆ ಬರಲಿದೆ. ಆದಾಗ್ಯೂ, ಬ್ಯಾಂಕ್‌ನ ಸಲಹಾಕಾರನಾಗಿ ಅವರು ಇನ್ನು ಒಂದು ವರ್ಷ ಕರ್ತವ್ಯ ನಿರ್ವಹಿಸಲಿದ್ದಾರೆ.
‘‘ಪ್ರಾತಿನಿಧಿಕ ನಿರ್ದೇಶಕ, ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕೇಶ್ ಅರೋರ ಪ್ರಾತಿನಿಧಿಕ ನಿರ್ದೇಶಕ ಮತ್ತು ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್ (ಎಸ್‌ಬಿಜಿ)ನ ಪ್ರಾತಿನಿಧಿಕ ನಿರ್ದೇಶಕ ಮತ್ತು ನಿರ್ದೇಶಕ ಹುದ್ದೆಗೆ 36ನೆ ವಾರ್ಷಿಕ ಶೇರುದಾರರ ಮಹಾಸಭೆಯಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದು ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್ ಘೋಷಿಸುತ್ತದೆ’’ ಎಂದು ಸಾಫ್ಟ್‌ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಭೆಯು ಜೂನ್ 22ರಂದು (ಬುಧವಾರ) ನಡೆಯಲಿದೆ.
ತಾನು ಎಸ್‌ಬಿಜಿಗೆ ಒಂದು ವರ್ಷ ಕಾಲ ಬೆಂಬಲ ನೀಡಲು ಉದ್ದೇಶಿಸಿದ್ದು, ಸಂಸ್ಥೆಯ ಸಲಹಾಕಾರನಾಗಿ ಮುಂದುವರಿಯುತ್ತೇನೆ ಎಂದು ನಿಕೇಶ್ ಟ್ವೀಟ್ ಮಾಡಿದ್ದಾರೆ.
ಸಾಫ್ಟ್‌ಬ್ಯಾಂಕ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಸಯೊಶಿ ಸನ್‌ರ ಉತ್ತರಾಧಿಕಾರಿಯೆಂದು ಅರೋರರನ್ನು ಪರಿಗಣಿಸಲಾಗಿತ್ತು.
ಹಾಲಿ ಎಸ್‌ಬಿಜಿಯ ನಿರ್ದೇಶಕ, ಅಧ್ಯಕ್ಷ ಹಾಗೂ ಸಿಒಒ ಆಗಿರುವ ಅರೋರ ಜುಲೈ 1ರಿಂದ ಸಲಹಾಕಾರನ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಸಾಫ್ಟ್‌ಬ್ಯಾಂಕ್ ಅಧ್ಯಕ್ಷ ಹಾಗೂ ಸಿಇಒ ಮಸಯೊಶಿ ಸನ್ ತನ್ನ ನಿವೃತ್ತಿಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ಅರೋರ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
‘‘ನನ್ನ 60ನೆ ಹುಟ್ಟಿದ ದಿನದ ಸಂದರ್ಭದಲ್ಲಿ ಸಾಫ್ಟ್‌ಬ್ಯಾಂಕ್‌ನ ನಿಯಂತ್ರಣವನ್ನು ಅವರಿಗೆ ವಹಿಸಲು ನಿರ್ಧರಿಸಿದ್ದೆ. ಆದರೆ, ನನ್ನ ಕೆಲಸ ಮುಗಿದಿಲ್ಲ ಎಂದು ನನಗೆ ಅನಿಸುತ್ತಿದೆ. ಇನ್ನೊಂದು 5-10 ವರ್ಷಗಳ ಕಾಲ ನಾನು ಕಂಪೆನಿಯ ಸಿಇಒ ಆಗಿ ಮುಂದುವರಿಯಲು ನಿರ್ಧರಿಸಿದ್ದೇನೆ’’ ಎಂದು ಹೇಳಿಕೆಯೊಂದರಲ್ಲಿ ಮಸಯೊಶಿ ತಿಳಿಸಿದ್ದಾರೆ.
ಅರೋರ ಸಾಫ್ಟ್‌ಬ್ಯಾಂಕ್‌ನ ಅಧ್ಯಕ್ಷ ಹಾಗೂ ಸಿಒಒ ಆಗಿ 2015 ಮೇ ತಿಂಗಳಲ್ಲಿ ಅಧಿಕಾರ ವಹಿಸಿದ್ದರು.
ಮಾರ್ಚ್ 31ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಅವರು 73 ಮಿಲಿಯ ಡಾಲರ್ (500 ಕೋಟಿ ರೂಪಾಯಿ) ವೇತನ ಪಡೆದಿದ್ದಾರೆ. ಅದಕ್ಕೂ ಹಿಂದಿನ ವರ್ಷದಲ್ಲಿ ಸೇರ್ಪಡೆ ಬೋನಸ್ ಸೇರಿದಂತೆ 135 ಮಿಲಿಯ ಡಾಲರ್ (ಸುಮಾರು 850 ಕೋಟಿ ರೂಪಾಯಿ) ವೇತನ ಪಡೆದಿದ್ದರು.