ಬಡವರ ಸೇವೆಯೊಂದಿಗೆ ಜಿಲ್ಲೆಯ ಅಭಿವೃದ್ಧಿಗಾಗಿ ಒಂದಾಗಿ ಹೆಜ್ಜೆ ಹಾಕೋಣ: ಅತಿ.ವಂ.ಡಾ.ಬರ್ನಾಡ್ ಮೊರಾಸ್

Update: 2016-06-21 15:56 GMT

ಮಂಗಳೂರು,ಜೂ.21: ಬಡವರ ಸೇವೆಯೊಂದಿಗೆ ಜಿಲ್ಲೆಯ ಅಭಿವೃದ್ಧಿಗಾಗಿ ಶಾಂತಿ ಸೌರ್ಹಾದತೆಯೊಂದಿಗೆ ಹೆಜ್ಜೆ ಹಾಕೋಣ ಎಂದು ಬೆಂಗಳೂರಿನ ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಅತಿ.ವಂ.ಡಾ.ಬರ್ನಾಡ್ ಮೊರಾಸ್ ಕರೆ ನೀಡಿದ್ದಾರೆ.

ಇಂದು ನಗರದ ಪುರಭವನದಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪೀಠದ ಬಿಷಪ್ ಅತಿ.ವಂ.ಡಾ.ಅಲೋಶಿಯಸ್ ಪೌಲ್ ಡಿಸೋಜರ ಜೀವನದ 75ನೆ ವರ್ಷಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡ ಪೌರ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಮಂಗಳೂರು ಕ್ರೈಸ್ತ ಧರ್ಮಪೀಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಲೋಶಿಯಸ್ ಪೌಲ್‌ರವರು ಉತ್ಸವ ಮೂರ್ತಿಯಂತೆ ಇರದೆ ಸಮಾಜದ ಎಲ್ಲಾ ಜನಸಮುದಾಯದ ಜೊತೆ ಪ್ರೀತಿ ವಿಶ್ವಾಸದೊಂದಿಗೆ ನಡೆದುಕೊಂಡವರು.ಬಡವರ ದೀನ ದಲಿತರ ನೋವಿಗೆ ಸ್ಪಂದಿಸಿದವರು. ಶಾಲೆ, ಕಾಲೇಜುಗಳನ್ನು ಹುಟ್ಟು ಹಾಕಿ ಶೈಕ್ಷಣಿಕ ಆರೋಗ್ಯದ ಸೇವೆ ಮಾಡಿದವರು. ಆಫ್ರಿಕಾದ ತಾಂಜೇನಿಯದಲ್ಲೂ ಬಡವರ ಸೇವೆ ಮಾಡಿದವರು. ಗುಲ್ಬರ್ಗ ಕ್ರೈಸ್ತ ಧರ್ಮ ಪೀಠ ರಚನೆಯಾಗಲು ಕಾರಣ ಕರ್ತರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಕ್ರೈಸ್ತನ ಹಾದಿಯಲ್ಲಿ ಧರ್ಮಾಧ್ಯಕ್ಷ ಹುದ್ದೆಗೆ ಚ್ಯುತಿ ಬಾರದಂತೆ ನಡೆದುಕೊಂಡು ಮಾದರಿಯಾಗಿದ್ದಾರೆ. ಅವರ ಸಾಧನೆ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ ಎಂದು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಾಸ್ ಶುಭ ಹಾರೈಸಿದರು.

‘‘ನಾನು ಧರ್ಮಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಸಮಾಜದ ಎಲ್ಲಾ ಜನರೊಂದಿಗೆ ಪ್ರೀತಿ, ಅನುಕಂಪ, ಸಹನಶೀಲತೆಯೊಂದಿಗೆ ಕ್ರಿಸ್ತನ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದ್ದೇನೆ. ಇಲ್ಲಿನ ಜನರು ನನ್ನನ್ನು ಪ್ರೀತಿ, ಗೌರವ, ಅಭಿಮಾನದಿಂದ ನಡೆಸಿಕೊಂಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಈ ಪೌರ ಸನ್ಮಾನ ಇಡೀ ಸಮುದಾಯಕ್ಕೆ ಸಂದ ಗೌರವವಾಗಿದೆ. ನಾನು ಕ್ರೈಸ್ತ ಅನುಯಾಯಿಯಾಗಲು ತೀರ್ಮಾನಿಸಿದಾಗ ಜನಸೇವೆ ಮಾಡಬೇಕೆಂಬ ಹಂಬಲ ಮಾತ್ರ ನನ್ನಲ್ಲಿತ್ತು. ಆದರೆ ನಾನು ನಿರೀಕ್ಷೆಯೂ ಮಾಡದಿದ್ದ ಧರ್ಮಾಧ್ಯಕ್ಷ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆಯಿತು.ಅದೊಂದು ಭಗವಂತನ ಕೃಪೆ ಎಂದು ನಾನು ಭಾವಿಸಿದ್ದೇನೆ.

ಸಮುದಾಯದ ಜನರ ಮೇಲೆ ಕೆಲವೊಂದು ಅಹಿತಕರ ಘಟನೆಗಳು ನಡೆದಾಗಲೂ ನಮಗೆ ಸಹಾಯ ನೀಡಿದ ಮಂಗಳೂರಿನ ಜನರು, ಜನ ಪ್ರತಿನಿಧಿಗಳನ್ನು ಮರೆಯಲು ಸಾಧ್ಯವಿಲ್ಲ. ಇಂದು ಜಿಲ್ಲೆಯ ಜನರು ಹಿಂದು, ಮುಸ್ಲಿಂ, ಕ್ರೈಸ್ತರೆನ್ನುವ ಭೇದವಿಲ್ಲದೆ ನನಗೆ ಪೌರ ಸನ್ಮಾನ ನೀಡಿರುವುದೇ ಜಿಲ್ಲೆಯ ಸೌರ್ಹಾದತೆಗೆ ನೀಡಿದ ಕೊಡುಗೆ ’’ ಎಂದು ಮಂಗಳೂರು ಕ್ರೈಸ್ತ ಧರ್ಮ ಪೀಠದ ಧರ್ಮಾಧ್ಯಕ್ಷ ಅತೀ.ವಂ.ಡಾ.ಅಲೋಶಿಯಸ್ ಪೌಲ್ ಡಿ ಸೋಜ ಪೌರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಜನ ಸಾಮನ್ಯರ ಪ್ರೀತಿಗೆ ಪಾತ್ರರಾದ ‘ಜನರ ಬಿಷಪ್’

ಮಂಗಳೂರು ಕ್ರೈಸ್ತ ಧರ್ಮ ಪೀಠದ ವಂದನೀಯ ಡಾ.ಅಲೋಶಿಯಸ್ ಪೌಲ್ ಡಿಸೋಜರವರು ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಅವರ ಪ್ರೀತಿಗೆ ಪಾತ್ರರಾದವರು. ಬಂಟ್ವಾಳ ತಾಲೂಕಿನ ಕುಗ್ರಾಮವೊಂದರಲ್ಲಿ ಹುಟ್ಟಿ ಕಳೆದ 20ವರ್ಷಗಳಲ್ಲಿ ಕ್ರೈಸ್ತ ಧರ್ಮ ಪೀಠದ ಧರ್ಮಾಧ್ಯಕ್ಷರಾದ ಬಳಿಕ ಮಹಾತ್ಮ ಗಾಂಧಿಯವರಂತೆ ಜಾತಿ, ಮತ, ಭೇದವಿಲ್ಲದೆ ಬಡವರ ಶಿಕ್ಷಣ ಮತ್ತು ಆರೋಗ್ಯ ಸೇವೆ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಕೆಲಸವನ್ನು ಮಾಡಿದ್ದಾರೆ.

ರೋಮ್‌ನ ವೆಟಿಕನ್‌ನ ಸುಪ್ರೀಮ್ ಟ್ರಿಬ್ಯುನಲ್‌ನಲ್ಲಿ ಎಡ್ವಕೇಟ್‌ನಂತಹ ಉನ್ನತ ಹುದ್ದೆಯನ್ನು ನಿರ್ವಹಿಸಿದ್ದಾರೆ. 500ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾಯಕವೇ ಕೈಲಾಸ ಎಂದು ನಂಬಿ ಸಮಾಜದ ಕಟ್ಟ ಕಡೆಯ ಜನರಲ್ಲೂ ಆತ್ಮವಿಶ್ವಾಸವನ್ನು ಮೂಡಿಸಿದ್ದಾರೆ. ಪ್ರಚಾರವನ್ನು ಬಯಸದ ಸಮರ್ಥ ನಾಯಕತ್ವ, ಅನುಕಂಪ, ಸರಳತೆ ಮೊದಲಾದ ಮಾನವೀಯ ಗುಣಗಳ ಮೂಲಕ ಮಂಗಳೂರಿನ ಜನತೆಗೆ, ಯುವಜನರಿಗೆ ಮಾದರಿಯಾಗಿದ್ದಾರೆ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತರಾಮಶೆಟ್ಟಿ ಅಭಿನಂದನಾ ಭಾಷಣ ಮಾಡಿ ಶುಭ ಹಾರೈಸಿದರು.

 ಸಮಾರಂಭದಲ್ಲಿ ಗಣ್ಯರ ಹಾರೈಕೆಗಳು

‘ಆಂತರಿಕವಾಗಿ ಆಧ್ಯಾತ್ಮ ಸಾಧನೆ ಮಾಡುತ್ತಾ ಸಮಾಜ ಮುಖಿ ಚಟುವಟಿಕೆಗಳ ಮೂಲಕ ಬಡಮಕ್ಕಳಿಗೆ ಶಿಕ್ಷಣ ನೀಡಲು ಶಾಲೆ ತೆರದು ಎಲ್ಲಾ ಸಮುದಾಯದ ಜನರ ಏಳಿಗೆಗೆ ಶ್ರಮಿಸಿದ ಸರಳ ವ್ಯಕ್ತಿತ್ವದ ಬಿಷಪ್ ಶತಾಯುಷಿಯಾಗಲಿ.’’-ಸ್ವಾಮಿ ಜಿತಕಾಮನಂದಜಿ, ಶ್ರೀ ರಾಮಕೃಷ್ಣ ಮಂಗಳೂರು.

‘‘ಬಡವರಿಗೆ ಆರೋಗ್ಯ, ಶೈಕ್ಷಣಿಕ ಸೇವೆ, ಸಬಲೀಕರಣದ ಯಶೋಗಾಥೆಗೆ ಕಾರಣರಾದ ಬಿಷಪರು ಸದ್ದಿಲ್ಲದೆ ಬಡವರ, ದುರ್ಬಲರ ಸೇವೆ ಮಾಡುತ್ತಾ ಬಂದು ನಮಗೆಲ್ಲಾ ಮಾದರಿಯಾಗಿದ್ದಾರೆ’’ -ಕೆ.ಹರಿನಾಥ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್.

*‘‘ದಾರಿದ್ಯ, ಅನಕ್ಷರತೆಯ ವಿರುದ್ಧ ಹೋರಾಟ ನಡೆಸಿ, ಎಲ್ಲರ ಬಗ್ಗೆಯೂ ನಯ, ವಿನಯ, ಅನುಕಂಪದೊಂದಿಗೆ, ಬಡ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಗಳನ್ನು ನೀಡಿ ತಮ್ಮ ಹುದ್ದೆಗೆ ನ್ಯಾಯ ಒದಗಿಸಿಕೊಟ್ಟ ಮಂಗಳೂರಿನ ಬಿಷಪ್‌ರಿಗೆ ಸರ್ವಶಕ್ತನು ದಿರ್ಘಾಯುಷ್ಯವನ್ನು ನೀಡಲಿ’’- ಮಂಗಳೂರು ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಸದಕತುಲ್ ಫೈಝಿಯವರು ಜಿಲ್ಲಾ ಖಾಝಿಯವರ ಪರವಾಗಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಬಳ್ಳಾರಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಹೆನ್ರಿ ಡಿ ಸೋಜ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಅಮರನಾಥ ಶೆಟ್ಟಿ, ಶಾಸಕರಾದ ಮೊಯ್ದೀನ್ ಬಾವ, ಶಕುಂತಳಾ ಶೆಟ್ಟಿ, ಗಣೇಶ್ ಕಾರ್ನಿಕ್, ಐವನ್ ಡಿಸೋಜ, ಮಾಜಿ ಶಾಸಕ ಯೋಗೀಶ್ ಭಟ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿನಯ ಹೆಗ್ಡೆ, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞ, ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ರೊನಾಲ್ಡ್ ಕುಲಾಸೊ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಮಾಜಿ ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಉಪ ಮೇಯರ್ ಸುಮಿತ್ರ ಕರಿಯ, ಮಾಜಿ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಬೆಥನಿ ಸಂಸ್ಥೆಯ ಮಹಾ ಮುಖ್ಯಸ್ಥೆ ವಂ,ರೋಸ್ ಸೆಲಿನ್ ಬಿ.ಎಸ್, ಅರ್ಸುಲಾಯ್ನ ಸಂಸ್ಥೆಯ ಮುಖ್ಯಸ್ಥೆ ವಂ.ಸುಶಿಲಾ ಸ್ಕಿಕ್ವೇರಾ, ಪ್ರಜ್ಞಾ ಸಲಹಾ ಕೇಂದ್ರದ ಸ್ಥಾಪಕಿ ಪ್ರೊ.ಹೀಲ್ಡಾ ರಾಯಪ್ಪನ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪೌರ ಸನ್ಮಾನ ಸಮಿತಿಯ ಪ್ರಧಾನ ಸಂಚಾಲಕ ಜೆ.ಆರ್.ಲೊಬೊ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಪಿ.ನೊರೋನ್ಹಾ ವಂದಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸನ್ಮಾನ ಪತ್ರ ವಾಚಿಸಿದರು. ಕನೆಪ್ಟಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News