ಐತ್ತೂರು: ಸರಕಾರಿ ಕೊಳವೆ ಬಾವಿಯ ಪಂಪು ಕಾಣೆ

Update: 2016-06-21 16:21 GMT

ಕಡಬ, ಜೂ.21: ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮೂಜೂರು ಎಂಬಲ್ಲಿ 2001ರಲ್ಲಿ ವಿಶ್ವಬ್ಯಾಂಕ್ ಯೋಜನೆಯಡಿಯಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಕೊಳವೆ ಬಾವಿಗೆ ಅಳವಡಿಸಲಾದ ಪಂಪು ಹಾಗೂ ಪೈಪ್ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸ್ಥಳೀಯರು ಪಂಚಾಯತ್ ಆಡಳಿತ ಮಂಡಳಿಗೆ ದೂರು ನೀಡಿದ್ದು, ಆಡಳಿತ ಮಂಡಳಿ ಕಡಬ ಪೊಲೀಸರಿಗೆ ದೂರು ನೀಡಲು ಮುಂದಾಗಿದೆ.

2013ರಲ್ಲಿ ಕೊಳವೆ ಬಾವಿಗೆ ಇಳಿಸಲಾದ ಪಂಪು ಕೆಟ್ಟು ಹೋಗಿದ್ದು ದುರಸ್ತಿಪಡಿಸಲು ಸ್ಥಳಿಯ ನಾಗರಿಕರು ಒತ್ತಾಯಿಸಿದ್ದರು. ಆದರೆ ದುರಸ್ತಿ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಸಮಸ್ಯೆ ಎರಡು ವರ್ಷಗಳಿಂದ ಇದ್ದರೂ ಆಡಳಿತ ಮಂಡಳಿ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಈ ನಡುವೆ ಜೂ.9 ರಂದು ಸ್ಥಳಿಯ ಗಣೇಶ್ ಎಂಬುವವರ ಮುಂದಾಳತ್ವದಲ್ಲಿ ಪಂಚಾಯತ್‌ಗೆ ದೂರು ನೀಡಿ ಕುಡಿಯುವ ನೀರಿನ ಪಂಪ್ ಕಳವು ಮಾಡಿ ಕೊಳವೆ ಬಾವಿಗೆ ಕಲ್ಲು ಹಾಕಲಾಗಿದೆ. ಕೊಳವೆ ಬಾವಿಯ ಒಂದು ಪೈಪು ಮುಜೂರು ನಿವಾಸಿ ಲಕ್ಷ್ಮಿನಾರಾಯಣ ಎಂಬುವವರಿಗೆ ಸೇರಿದ ಜಾಗದಲ್ಲಿದೆ. ಉಳಿದ ಎರಡು ಪೈಪುಗಳು ಮೂಜೂರಿನಲ್ಲಿರುವ ಕೆಎಫ್‌ಡಿಸಿ ರಬ್ಬರ್ ನಿಗಮದ ಗೋಡಾನ್‌ನಲ್ಲಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಮನವಿ ನೀಡಲಾಗಿದೆ.

ತನಿಖಾ ತಂಡ ರಚನೆ

ಕುಡಿಯುವ ನೀರಿನ ಫಲಾನುಭವಿಗಳ ಮನವಿ ಮೇರೆಗೆ ಜೂ.9ರಂದು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಸೋಮವಾರ ಪಂಚಾಯತ್ ಅಧ್ಯಕ್ಷ ಸತೀಶ್ ಕೆ., ಸದಸ್ಯರಾದ ಇಸ್ಮಾಯೀಲ್, ಶ್ರೀಧರ ಗೌಡ, ಎಂ.ಪಿ. ಯೂಸುಫ್, ಪಿ.ಪಿ. ಮಥಾಯಿಸ್ ಮೊದಲಾದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಲಕ್ಷ್ಮೀನಾರಾಯಣ ಎಂಬವರ ಜಾಗದಲ್ಲಿ ಒಂದು ಪೈಪು ಕಂಡು ಬಂದಿತ್ತಲ್ಲದೆ ಇನ್ನುಳಿದ ಎರಡು ಪೈಪು ಕೆಎಫ್‌ಡಿಸಿ ರಬ್ಬರ್ ನಿಗಮದ ಗೋಡಾನ್‌ನಲ್ಲಿ ಕಂಡುಬಂದಿತ್ತು. ಕೊಳವೆಬಾವಿಗೆ ಕಲ್ಲು ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕೊಳವೆ ಬಾವಿಯ ಹೊರಗಿರುವ ಇನ್ನುಳಿದ ಪೈಪುಗಳು ಕಳ್ಳತನವಾಗಿದೆ ಎನ್ನಲಾದ ಪೈಪಿಗೆ ತಾಳೆಯಾಗುತ್ತಿದ್ದು ಈ ಸಂಬಂಧ ಆಡಳಿತ ಮಂಡಳಿ ಹೆಚ್ಚಿನ ತನಿಖೆಗಾಗಿ ಕಡಬ ಪೊಲೀಸರಿಗೆ ದೂರು ನೀಡಲು ಮುಂದಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಪಂಚಾಯತ್ ವ್ಯಾಪ್ತಿಯ ಕಡೂತಿಗುಡ್ಡೆ, ಮೂಜೂರು, ಸುಂಕದಕಟ್ಟೆ ಪರಿಸರದ ಸುಮಾರು 25 ಮನೆಗಳಿಗೆ ಈ ಕೊಳವೆಬಾವಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಪಂಪು ಕೆಟ್ಟು ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದೀಗ ಕೆಟ್ಟು ಹೋದ ಕೊಳವೆ ಬಾವಿಯ ಹತ್ತಿರ ಜಿಲ್ಲಾ ಪಂಚಾಯತ್ ವತಿಯಿಂದ ಪಂಪು ಶೆಡ್ಡು ನಿರ್ಮಿಸಲಾಗಿದ್ದು, ಹೊಸದಾದ ಕೊಳವೆಬಾವಿ ಕೊರೆಯಲು ಪಾಯಿಂಟ್ ಕೂಡ ಮಾಡಲಾಗಿದೆ.

ಈ ಹಿಂದಿನ ಕೊಳವೆಬಾವಿಯ ಮೀಟರ್ ನಂಬರು (89) ಹಾಗೂ ಹೊಸದಾಗಿ ಆಳವಡಿಸಲಾದ ಪಂಪು ಶೆಡ್ಡಿನ ಮೀಟರ್ ನಂಬರ್ (89) ಒಂದೇ ರೀತಿಯಲ್ಲಿದೆ. ಈ ಬಗ್ಗೆ ಪಂಚಾಯತ್ ಯಾವುದೇ ಹೇಳಿಕೆ ನೀಡಲು ಮುಂದಾಗಿಲ್ಲ ಎನ್ನುತ್ತಾರೆ ದೂರುದಾರ ಗಣೇಶ್.

ಮೂಜುರು ಎಂಬಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಯ ಪಂಪು ಕೆಟ್ಟು ಹೋಗಿ ನೀರು ಸರಬರಾಜು ಸ್ಥಗಿತಗೊಂಡಿದೆ. ಸಮಸ್ಯೆ ಬಗೆಹರಿಸಲು ಪಂಚಾಯತ್ ಮುಂದಾಗಿದ್ದು, ಈ ನಡುವೆ ಕೊಳವೆಬಾವಿಯ ಪಂಪು ಪೈಪು ಕಳ್ಳತನವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಪಂಚಾಯತ್‌ನಿಂದ ತನಿಖಾ ತಂಡ ರಚಿಸಿ ತನಿಖೆ ನಡೆಸಲಾಗಿದೆ. ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಲಾಗುವುದು. ಅಲ್ಲದೆ ಹೆಚ್ಚಿನ ತನಿಖೆಗೆ ಕಡಬ ಪೊಲೀಸರಿಗೆ ದೂರು ನೀಡಲಾಗುವುದು.

-ಸತೀಶ್ ಕೆ., ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ.

 
ಸಾರ್ವಜನಿಕರ ದೂರಿನಂತೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಸೋಮವಾರ ಮೂಜೂರು ಕುಡಿಯುವ ನೀರಿನ ಸ್ಥಾವರದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಅಲ್ಲಿ ಪಂಪು ಮತ್ತು ಪೈಪು ಇಲ್ಲದಿರುವುದು ಕಂಡುಬಂದಿದೆ. ಈ ಬಗ್ಗೆ ಮೇಲಧಿಕಾರಿಗಳಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.

- ಜಯರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News