ಯೋಗ ಮನಸ್ಸು ಮತ್ತು ದೇಹದ ಹತೋಟಿಗೆ ಸಹಕಾರಿ: ಪ್ರೊ.ಕೆ.ಬೈರಪ್ಪ

Update: 2016-06-21 17:45 GMT

ಕೊಣಾಜೆ, ಜೂ.21: ಯೋಗದಿಂದ ಆರೋಗ್ಯದ ಸಂರಕ್ಷಣೆಯ ಜೊತೆಗೆ ದೇಹ ಮತ್ತು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪಅಭಿಪ್ರಾಯಪಟ್ಟರು. 

ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಯೋಗ ನಮ್ಮ ದೇಶದ ಸಂಪತ್ತು ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ. ಆದರೆ ಕೆಲವು ಕಮ್ಯೂನಿಷ್ಟ್ ರಾಷ್ಟ್ರಗಳಲ್ಲಿ ಯೋಗ ಆಚರಣೆಗೆ ನಿಷೇಧವಿತ್ತು. ಇದೀಗ ಇಡೀ ಜಗತ್ತೇ ಯೋಗದ ಮಹತ್ವವನ್ನು ಅರಿತುಕೊಂಡಿದೆ. ಕಳೆದ ಎರಡು ವರ್ಷದಿಂದ ಯೋಗವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಪ್ರಪಂಚದ ಉದ್ದಗಲಕ್ಕೂ ಪರಿಚಿತಗೊಂಡು ಪ್ರಸಿದ್ದಿಯಾಗಿದೆ ಎಂದರು. ಮಂಗಳೂರು ವಿವಿಯ ಯೋಗ ವಿಜ್ಞಾನದ ವಿಭಾಗದ ಮೂಲಕ ಬಹಳಷ್ಟು ಜನರು ಯೋಗದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಯೋಗ ವಿಜ್ಞಾನ ವಿಭಾಗದ ಪ್ರೊ.ಕೃಷ್ಣ ಶರ್ಮಾ ಮಾತನಾಡಿ, ಯೋಗವು ನಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಎಷ್ಟು ಅವಶ್ಯವೋ ಅದೇ ರೀತಿಯಲ್ಲಿ ಇಂದು ಯೋಗ ವಿಜ್ಞಾನ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ವಿಫುಲವಾಗಿದ್ದು ಮಂಗಳೂರು ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿದೇಶದಲ್ಲಿಯೂ ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿ.ವಿ. ಕುಲಪತಿ ಸಹಿತ ಸಿಬ್ಬಂದಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು. ಅಲ್ಲದೆ ಯೋಗ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಯೋಗ ವಿಜ್ಞಾನದ ವಿವಿಧ ಆಸನಗಳ ಕುರಿತ ಪ್ರಾತಕ್ಷಿಕೆ ನಡೆಯಿತು.

ಸಮಾರಂಭದಲ್ಲಿ ವಿವಿ ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ, ವಿದ್ಯಾರ್ಥಿ ಕ್ಷೇಮ ಪಾಲನಾ ವಿಭಾಗದ ಡಾ. ಉದಯ ಕುಮಾರ್ ಬಾರ್ಕೂರು, ಮೂಟಾದ ಅಧ್ಯಕ್ಷ ಪ್ರೊ.ಬಾಲಕೃಷ್ಣ ರಾವ್ ಮುಂತಾದವರು ಉಪಸ್ಥಿತರಿದ್ದರು. ಡಾ.ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News