ಎಸಿಬಿಯಿಂದ ಕೇಜ್ರಿವಾಲ್-ಶೀಲಾ ಸರಕಾರಗಳ ವಿರುದ್ಧ ಎಫ್‌ಐಆರ್
ಹೊಸದಿಲ್ಲಿ, ಜೂ.21: ದಿಲ್ಲಿ ಸರಕಾರದ ಭ್ರಷ್ಟಾಚಾರ ವಿರೋಧಿ ಬ್ಯೂರೊ(ಎಸಿಬಿ) ರೂ. 400 ಕೋಟಿಯ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿ ಹಿಂದಿನ ಶೀಲಾ ದೀಕ್ಷಿತ್ ಸರಕಾರ ಹಾಗೂ ಈಗಿನ ಅರವಿಂದ ಕೇಜ್ರಿವಾಲ್ ಸರಕಾರದ ವಿರುದ್ಧ ಸೋಮವಾರ ಎಫ್‌ಐಆರ್ ಒಂದನ್ನು ದಾಖಲಿಸಿದೆ.
ಕೇಜ್ರಿವಾಲ್ ಹಾಗೂ ಶೀಲಾ ದೀಕ್ಷಿತ್‌ರನ್ನು ವಿಚಾರಣೆಗಾಗಿ ಕರೆಸುವ ಸಾಧ್ಯತೆಯಿದೆ ಎಂದು ಎಸಿಬಿ ಮುಖ್ಯಸ್ಥ ಮುಕೇಶ್ ಮೀನಾ ತಿಳಿಸಿದ್ದಾರೆ. ಇದು ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸುವ ನಿರೀಕ್ಷೆಯಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯೊಂದಿಗೆ ಇತರ 2 ಸೆಕ್ಷನ್‌ಗಳನ್ವಯ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಮೀನಾ ಹೇಳಿದ್ದಾರೆ.
ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ಸೆ.13(1ಡಿ), ಕ್ರಿಮಿನಲ್ ಪಿತೂರಿ ಹಾಗೂ ಸಾರ್ವಜನಿಕ ಸೇವಕನಿಂದ ಕ್ರಿಮಿನಲ್ ವಿಶ್ವಾಸಘಾತವನ್ನುಲ್ಲೇಖಿಸುವ ಸೆ.120 ಬಿ ಹಾಗೂ 409ಗಳನ್ನೂ ಜಾಗೃತಗೊಳಿಸಲಾಗಿದೆಯೆಂದು ಟಿಒಐಗೆ ತಿಳಿದುಬಂದಿದೆ. ಎಫ್‌ಐಆರ್(ನ.10) ಎಎಪಿ ಸರಕಾರ ನಡೆಸಿದ್ದ ತನಿಖಾ ವರದಿ ಹಾಗೂ ಗುತ್ತಿಗೆ ರದ್ದುಗೊಳಿಸದಿದ್ದುದಕ್ಕಾಗಿ ಕೇಜ್ರಿವಾಲ್ ವಿರುದ್ಧವೂ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿಯ ವಿಜೇಂದರ್ ಗುಪ್ತಾ ಸಲ್ಲಿಸಿರುವ ದೂರೊಂದನ್ನು ಆಧರಿಸಿದೆ. ಸರಕಾರದ ತನಿಖಾ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಎಸಿಬಿಗೆ ಕಳುಹಿಸಿದ್ದರು.
ಈ ಪ್ರಕರಣವು 2012ರಲ್ಲಿ ನಡೆದುದಾಗಿದೆ. ದೀಕ್ಷಿತ್ ಅಧ್ಯಕ್ಷೆಯಾಗಿದ್ದ ದಿಲ್ಲಿ ಜಲಮಂಡಳಿಯು ಖಾಸಗಿ ಕಂಪೆನಿಗಳಿಂದ 385 ಸ್ಟೇನ್‌ಲೆಸ್ ಸ್ಟೀಲ್ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಟೆಂಡರ್ ನೀಡಿತ್ತು. ಕಳೆದ ವರ್ಷ ಜೂ.19ರಂದು ಎಎಪಿ ಸರಕಾರವು, ಈ ವ್ಯವಹಾರದ ಕುರಿತು ಸತ್ಯಶೋಧನ ಸಮಿತಿಯೊಂದನ್ನು ರಚಿಸಿತ್ತು. ಅದು ಆಗಸ್ಟ್‌ನಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ರೂ. 400 ಕೋಟಿಯ ಅವ್ಯವಹಾರ ನಡೆದಿದೆಯೆಂದು ಆರೋಪಿಸಿತ್ತು.
ನಾಮಮಾತ್ರ ನೆಲೆಯಲ್ಲಿ ಸಲಹೆಗಾರನೊಬ್ಬನನ್ನು ನೇಮಿಸಿದ್ದು, ಅದರಿಂದ ರೂ. 36.5 ಕೋಟಿ ನಷ್ಟವಾಗಿರುವುದನ್ನು ಸಮಿತಿ ಪತ್ತೆಹಚ್ಚಿತ್ತು. ಮೊದಲು ಏಕೈಕ ಟೆಂಡರ್ ಎಂಬ ನೆಲೆಯಲ್ಲಿ ಒಂದು ಕಂಪೆನಿಯ ಟೆಂಡರನ್ನು ತಿರಸ್ಕರಿಸಿದ್ದರೂ, ಬಳಿಕ ಏಕೈಕ ಟೆಂಡರ್‌ನ ಮೇಲೆಯೇ ಕೆಲಸವನ್ನು ಒಪ್ಪಿಸಲಾಗಿತ್ತು. ಇನ್ನೊಂದು ಕಂಪೆನಿ ನಮೂದಿಸಿದ್ದ ರೂ. 323.9 ಕೋಟಿಗಳ ಟೆಂಡರ್‌ಗೆ ಹೋಲಿಸಿ, ಹೆಚ್ಚು ದರಕ್ಕೆ ಕೆಲಸ ಒಪ್ಪಿಸಿದುದರಿಂದ ನಷ್ಟವನ್ನು ಅದು ಲೆಕ್ಕ ಹಾಕಿತ್ತು.
ಎಫ್‌ಐಆರ್ ಮೊದಲು ಸತ್ಯಶೋಧನ ಸಮಿತಿಯನ್ನು ಉಲ್ಲೇಖಿಸಿದ್ದು, ಅದರ ವರದಿಯನ್ನು ಬೆಂಬಲಿಸಿದೆ. ಬಳಿಕ ಅದು ಕೇಜ್ರಿವಾಲ್ ಸರಕಾರವನ್ನುಲ್ಲೇಖಿಸಿ, ಅವ್ಯವಹಾರದ ಆರೋಪ ತೀವ್ರ ಸ್ವರೂಪದ್ದಾಗಿದೆ ಹಾಗೂ ಸಾರ್ವಜನಿಕರ ಹಣವನ್ನೊಳಗೊಂಡಿದೆ. ಮೇಲ್ನೋಟಕ್ಕೆ, ಹಿಂದಿನ ಹಾಗೂ ಈಗಿನ ಸರಕಾರಗಳ ಮೇಲೆ ಅಪರಾಧವನ್ನು ರೂಪಿಸಬಹುದಾಗಿದೆಯೆಂದು ಹೇಳಿದೆ.