ದಾಭೋಲ್ಕರ್, ಪನ್ಸಾರೆ ಹತ್ಯೆಗೆ ಒಂದೇ ಬೈಕ್, ಪಿಸ್ತೂಲು ಬಳಕೆ: ಸಿಬಿಐ

Update: 2016-06-22 06:28 GMT

ಮುಂಬೈ, ಜೂ.22: ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಸಿಪಿಐ ನಾಯಕ ಗೋವಿಂದ ಪನ್ಸಾರೆ ಅವರ ಕೊಲೆ ಮಾಡಲು ದಾಳಿಕೋರರು ಉಪಯೋಗಿಸಿದ ಮೋಟಾರ್ ಸೈಕಲ್ ಹಾಗೂ ಆಯುಧಗಳು ಒಂದೇ ಆಗಿವೆ ಎಂದು ಸಿಬಿಐ ತನಿಖೆಯೊಂದು ದೃಢಪಡಿಸಿದೆ.

ಈ ವಿಚಾರವನ್ನು ಬಾಂಬೆ ಹೈಕೋರ್ಟಿನ ಮುಂದೆ ಸಿಬಿಐ ಗುರುವಾರದಂದು ಸಲ್ಲಿಸಲಿರುವ ವರದಿಯಲ್ಲಿ ವಿವರಿಸಲಿದೆ.

ದಾಭೋಲ್ಕರ್ ಹತ್ಯೆಗೆ ಸುಮಾರು ಎಂಟು ತಿಂಗಳು ಹಿಂದೆ, ಜನವರಿ 22, 2013 ರಂದು ಪ್ರಸಕ್ತ ಜೈಲಿನಲ್ಲಿರುವ ಹಿಂದೂ ಜನ ಜಾಗೃತಿಯ ಕಮಾಂಡರ್ ಎಂದು ಗುರುತಿಸಲಾದ ವೀರೇಂದ್ರ ತಾವಡೆ ತನ್ನ ಕಪ್ಪು ಬಣ್ಣದ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲಿನಲ್ಲಿ ಪನ್ವೇಲ್‌ನಿಂದ ಪುಣೆಗೆ ತೆರಳಿದ್ದರು. ಆಗಸ್ಟ್ 20, 2013 ರಂದು ದಾಭೋಲ್ಕರ್ ಅವರ ಪುಣೆ ನಿವಾಸದ ಹೊರಗೆ ಅವರ ಹತ್ಯೆ ನಡೆದಾಗ ಆರೋಪಿಗಳಾದ ಸಾರಂಗ್ ಅಕೋಲ್ಕರ್ ಮತ್ತು ಇನ್ನಷ್ಟೇ ಬಂಧಿಸಬೇಕಾಗಿರುವ ಇನ್ನೊಬ್ಬ ಆರೋಪಿ ಇದೇ ಮೋಟಾರ್ ಸೈಕಲ್ಲಿನಲ್ಲಿ ಬಂದಿದ್ದರು.

ತಾವಡೆ ಇದೇ ಮೋಟಾರ್ ಸೈಕಲನ್ನು ಡಿಸೆಂಬರ್ 2014ರಲ್ಲಿ ಕೊಲ್ಲಾಪುರಕ್ಕೆ ಕೊಂಡು ಹೋಗಿ ಅಲ್ಲಿ ಪನ್ಸಾರೆ ಕಚೇರಿಯಿಂದ ಕೆಲವೇ ಕಿ.ಮೀ. ದೂರವಿರುವ ಸನಾತನ ಸಂಸ್ಥಾ ಸೇವಕ ನಿವಾಸದಲ್ಲಿ ತಂಗಿದ್ದರೆಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಪನ್ಸಾರೆ ಹತ್ಯೆಯಾಗುವ ಎರಡು ತಿಂಗಳ ಮೊದಲು ನಡೆದಿದ್ದು ಸ್ಥಳ ಪರಿವೀಕ್ಷಣೆ ಮಾಡುವ ಉದ್ದೇಶ ಹೊಂದಿತ್ತೆಂಬುದು ಸ್ಪಷ್ಟವಾಗಿದೆಯೆಂದೂ ಮೂಲಗಳು ಮಾಹಿತಿ ನೀಡಿವೆ.

ಫೆಬ್ರವರಿ 2015ರಲ್ಲಿ ಕೊಲೆ ನಡೆಸುವ ಸಲುವಾಗಿ ತಾವಡೆ ಈ ಮೋಟಾರ್ ಸೈಕಲನ್ನು ಆರೋಪಿಗಳಿಗೆ ನೀಡಿದ್ದರೆಂದು ಹೇಳಲಾಗುತ್ತಿದೆ. ಎರಡೂ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲು ಮಹತ್ವದ ಸುಳಿವಾಗಿರುವ ಈ ಮೋಟಾರ್ ಸೈಕಲನ್ನು ಸಿಬಿಐ ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.

ಪನ್ಸಾರೆ ಕೊಲೆಯ ನಂತರ ಈ ಮೋಟಾರ್ ಸೈಕಲನ್ನು ಏನು ಮಾಡಲಾಯಿತು ಎಂಬುದನ್ನು ಆರೋಪಿಗಳು ಇನ್ನೂ ಬಾಯ್ಬಿಟ್ಟಿಲ್ಲ. ಅವರು ಅದನ್ನು ವಿಲೇವಾರಿ ಮಾಡಿರಬಹುದಾದರೂ ಅದನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News