ಅರ್ಜೆಂಟೀನದ ಸ್ಟಾರ್ ಆಟಗಾರ ಮೆಸ್ಸಿಯ ಕಾಲಿಗೆ ಎರಗಿದ ಅಭಿಮಾನಿ!
ಹೌಸ್ಟನ್, ಜೂ.22: ಅಮೆರಿಕ ವಿರುದ್ಧ ಮಂಗಳವಾರ ಇಲ್ಲಿ ನಡೆದ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ಪಂದ್ಯ ಕೊನೆಗೊಂಡ ತಕ್ಷಣ ಮೈದಾನದೊಳಗೆ ನುಸುಳಿದ ಫುಟ್ಬಾಲ್ ಅಭಿಮಾನಿಯೋರ್ವ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಕಾಲಿಗೆ ಎರಗಿದ ಅಪರೂಪದ ಘಟನೆ ನಡೆಯಿತು.
ಅರ್ಜೆಂಟೀನ ಆಟಗಾರರು ಧರಿಸುವ ನೀಲಿ ಹಾಗೂ ಬಿಳಿ ಬಣ್ಣದ ಜರ್ಸಿಯನ್ನೇ ಧರಿಸಿದ್ಧ ಫುಟ್ಬಾಲ್ ಅಭಿಮಾನಿ ಪಂದ್ಯ ಕೊನೆಗೊಂಡ ತಕ್ಷಣವೇ ಮೆಸ್ಸಿಯತ್ತ ಧಾವಿಸಿದರು. ತನ್ನತ್ತ ಬಂದ ಅಭಿಮಾನಿಯನ್ನು ಬರಮಾಡಿಕೊಂಡ ಮೆಸ್ಸಿ ಆತನ ಜೆರ್ಸಿಯ ಮೇಲೆ ಸಹಿ ಹಾಕಿದರು. ಇದರಿಂದ ಪುಳಕಿತನಾದ ಆತ ಮೆಸ್ಸಿಯ ಕಾಲಿಗೆ ಎರಗಿ ಬಿಗಿದಪ್ಪಿಕೊಂಡರು.
ಇದಕ್ಕೆ ಮೊದಲು ದ್ವಿತೀಯಾರ್ಧದ ಆರಂಭದಲ್ಲಿ ಅಭಿಮಾನಿಯೋರ್ವ ಮೈದಾನದೊಳಗೆ ನುಸುಳಿಸಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಗೆ ಬಿಟ್ಟರು. ಅಮೆರಿಕ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೆಸ್ಸಿ ಅತ್ಯುತ್ತಮ ಪ್ರದರ್ಶನ ನೀಡಿ ಅರ್ಜೆಂಟೀನ ತಂಡ 4-0 ಅಂತರದಿಂದ ಗೆಲುವು ಸಾಧಿಸಲು ನೆರವಾದರು. ಮೆಸ್ಸಿ ಈ ಪಂದ್ಯದಲ್ಲಿ ಒಂದು ಗೋಲು ಬಾರಿಸಿದ್ದರು. ಇನ್ನೆರಡು ಗೋಲು ಬಾರಿಸಲು ನೆರವಾಗಿದ್ದರು.