ಮರಳು ಸಾಗಾಟದ ಟಿಪ್ಪರ್ ಗೆ ಉಸ್ತಾದ್ ಬಲಿ
ಮಂಜೇಶ್ವರ: ಮರಳು ಸಾಗಾಟದ ಟಿಪ್ಪರ್ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಹೊಸಂಗಡಿ ಸಮೀಪದ ಕಡಂಬಾರ್ ರಸ್ತೆಯಲ್ಲಿ ಇಂದು ಮಧ್ಯಾಹ್ನ 12.20 ರ ಸುಮಾರಿಗೆ ಸಂಭವಿಸಿದೆ.
ಮಚ್ಚಂಪ್ಪಾಡಿ ನಿವಾಸಿ ಅಬ್ಬಾಸ್ ಮೌಲವಿ ರವರ ಪುತ್ರ ಅಬ್ದುಲ್ ರಜಾಕ್ ಮೌಲವಿ (40) ಮೃತ ದುರ್ದೈವಿ. ಮಜೀರ್ಪಳ್ಳ ಉರ್ಣಿ ಎಂಬಲ್ಲಿ ಮಸೀದಿಯೊಂದರ ಉಸ್ತಾದ್ ಆಗಿರುವ ಅಬ್ದುಲ್ ರಜಾಕ್ ರವರು ತನ್ನ ಪಲ್ಸರ್ ಬೈಕ್ ನಲ್ಲಿ ಹೊಸಂಗಡಿ ಭಾಗದಿಂದ ಉರ್ಣಿ ಭಾಗಕ್ಕೆ ತೆರಳುತ್ತಿರುವ ಮಧ್ಯೆ ಎದುರಿನಿಂದ ಅಮಿತ ವೇಗದಲ್ಲಿ ಯಮದೂತನಂತೆ ಆಗಮಿಸಿದ ಮರಳು ಸಾಗಾಟದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳದಲ್ಲೇ ಅಬ್ದುಲ್ ರಜಾಕ್ ಕೊನೆಯುಸಿರೆಳೆದಿರುವುದಾಗಿ ಹೇಳಲಾಗಿದೆ. ಆದರೂ ಸ್ಥಳೀಯರು ಕೂಡಲೇ ಅಪಘಾತಕ್ಕೀಡಾದವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿನ ವೈದ್ಯರು ಮೃತ ಪಟ್ಟಿರುವುದನ್ನು ಖಚಿತ ಪಡಿಸಿಸಿದ್ದಾರೆ. ಘಟನೆ ನಡೆದು ಎರಡು ಗಂಟೆ ಕಳೆದರೂ ಮಂಜೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿಲ್ಲವೆಂಬ ಆರೋಪ ಕೇಳಿ ಬಂದಿದೆ.