ವಿಟ್ಲ: ನಾಯಿಗಳಿಗೆ ವಿಷವಿಕ್ಕಿ ಕಳ್ಳತನಗೈಯುತ್ತಿದ್ದ 6 ಮಂದಿ ಖದೀಮರ ಬಂಧನ
ಬಂಟ್ವಾಳ, ಜೂ. 22: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ನಡೆಯುತ್ತಿದ್ದ ವಾಹನ, ಅಡಿಕೆ, ದನಗಳ ಕಳವು ಪ್ರಕರಣವನ್ನು ಭೇದಿಸಿರುವ ವಿಟ್ಲ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿ ಕಳವಾದ ಸೊತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷನ್ ಜಿ. ಬೊರಸೆ ತಿಳಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಮೂಸ ಎಂಬವರ ಮಗ ಬಾರಿಕ್(32), ವಿಟ್ಲ ಪಡ್ನೂರು ಗ್ರಾಮದ ಕೊಡುಂಗಾಯಿ ರಾಧುಕಟ್ಟೆ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಬಶೀರ್(25), ವಿಟ್ಲ ಪಡ್ನೂರು ಗ್ರಾಮದ ಕೊಡುಂಗಾಯಿ ಕಡಂಬು ಕ್ವಾಟ್ರಸ್ ನಿವಾಸಿ ಆದಂ ಎಂಬವರ ಪುತ್ರ ಅಶ್ರಫ್(19), ವಿಟ್ಲ ಪಡ್ನೂರು ಗ್ರಾಮದ ಕೊಡುಂಗಾಯಿ ರಾಧುಕಟ್ಟೆ ನಿವಾಸಿ ಅಬ್ಬಾಸ್ ಎಂಬವರ ಮಗ ಸೈಫುದ್ದೀನ್(19), ಇರಾ ಗ್ರಾಮದ ಬಾಳೆಪುಣಿ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಜಾಬಿರ್(26), ಕೊಳ್ನಾಡ್ ಗ್ರಾಮದ ಕುಡ್ತಮುಗೇರು ಕರೈ ನಿವಾಸಿ ಎಚ್ ಎಮ್.ಶಾಫಿ ಎಂಬವರ ಪುತ್ರ ಝುಬೈರ್ ಕೆ.(23) ಬಂಧಿತ ಆರೋಪಿಗಳು.
ಆರೋಪಿಗಳು ಕೊಳ್ನಾಡು ಗ್ರಾಮದ ಕುಡ್ತಮುಗೇರು ಪೇಟೆಯಲ್ಲಿರುವ ಅಡಿಕೆ ಅಂಗಡಿಯಲ್ಲಿ ಕಳವು, ಇಲ್ಲಿನ ಶ್ರೀನಿವಾಸ ಆಚಾರ್ಯ ಎಂಬವರ ಮನೆಯಲ್ಲಿ ಸಾಕು ನಾಯಿಗಳಿಗೆ ವಿಷ ಉಣಿಸಿ ಅಡಿಕೆ ಕಳ್ಳತನ, ಸುರಿಬೈಲ್ ಮಸೀದಿಯ ಆವರಣದಲ್ಲಿರಿಸಿದ ಅಡಿಕೆ ಕಳವು, ಕೊಡಂಗೆ ಎರ್ಮೆನಿಲೆ ರತ್ನಾಕರ ಶೆಟ್ಟಿಯವರ ಮನೆಯ ಸಾಕು ನಾಯಿಗಳಿಗೆ ವಿಷ ಉಣಿಸಿ ಅಡಿಕೆ ಕಳ್ಳತನ, ಕಂಬಳಬೆಟ್ಟು ದರ್ಗಾ ಬಳಿಯ ಅಡಿಕೆ ಅಂಗಡಿಯಲ್ಲಿ ಕಳ್ಳತನ ಹಾಗೂ ಅಳಿಕೆ ಮಡಿಯಾಲದಲ್ಲಿ ಮತ್ತು ಅಳಕೆಮಜಲು ಪೆಲತ್ತಿಂಜ ಎಂಬಲ್ಲಿನ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಬಂಧಿತ ಆರೋಪಿಗಳಿಂದ 2 ಕಾರು, 1 ಪಿಕ್ ಅಪ್, 1 ರಿಕ್ಷಾ, 1,500 ಕೆ.ಜಿ. ಅಡಿಕೆ ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳ ಪೈಕಿ ಬಶೀರ್ನ ಮೇಲೆ ಜಿಲ್ಲೆಯಾದ್ಯಂತ 19 ವಾಹನ ಕಳ್ಳತನ ಪ್ರಕರಣ, ಕಾಸರಗೋಡು ಮತ್ತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ, ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಗುಜರಾತ್ ನಲ್ಲಿ ಪೊಲೀಸರು ಬಂಧಿಸಿ ಒಂದುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿ 7 ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಹಾಗೆಯೇ ಆರೋಪಿಗಳಾದ ಬಾರಿಕ್ ವಿಟ್ಲ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು ಸಣ್ಣ ಪುಟ್ಟ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಜಾಬಿರ್ ಮಂಜೇಶ್ವರ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಅವರು ತಿಳಿಸಿದರು.
ಈ ಕಳವು ಪ್ರಕರಣ ಭೇದಿಸುವಲ್ಲಿ ಬಂಟ್ವಾಳ ಡಿವೈಎಸ್ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ವಿಟ್ಲ ಪಿಎಸೈ ಪ್ರಕಾಶ್ ದೇವಾಡಿಗ, ಸಿಬ್ಬಂದಿಯಾದ ಜಿನ್ನಪ್ಪ ಗೌಡ, ರಾಮಚಂದ್ರ, ಜಯಕುಮಾರ್, ಪ್ರವೀಣ್ ರೈ, ರಕ್ಷಿತ್ ರೈ, ಪ್ರವೀಣ್ ಕುಮಾರ್, ರಮೇಶ್, ಲೋಕೇಶ್, ಸತೀಶ್, ಭವಿತ್ ರೈ, ಪ್ರಮಿಳಾ ಕೆ.ಎಸ್., ಬಂಟ್ವಾಳ ವ್ರತ್ತ ನಿರೀಕ್ಷಕರ ತಂಡದ ವಾಸು ನಾಯ್ಕ, ಗಿರೀಸ್, ನರೇಸ್ ಹಾಗೂ ಚಾಲಕರಾದ ಯೋಗೀಶ್, ರಘುರಾಮ, ವಿಜಯೇಶ್ವರ ಹಾಗೂ ಜಿಲ್ಲಾ ಕಂಪ್ಯೂಟರ್ ವಿಭಾಗದ ಸಂಪತ್, ದಿವಾಕರ್ ಸಹಕರಿಸಿದ್ದಾರೆ ಎಂದರು.
ಹಟ್ಟಿಯಿಂದ ದನಗಳ ಕಳವು ಮತ್ತು ಸಾಕು ನಾಯಿಗಳಿಗೆ ವಿಷ ಉಣಿಸಿ ಅಡಿಕೆ ಕಳ್ಳತನದ 8 ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪ್ರಶಂಸಿಸಿ 10 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.