ತ್ರಾಸಿ ದುರಂತದಲ್ಲಿ ಮಡಿದ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಪ್ರಮೋದ್ ಮಧ್ವರಾಜ್
ಕುಂದಾಪುರ, ಜೂ.22: ಮಂಗಳವಾರ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಮೊವಾಡಿ ಕ್ರಾಸ್ ಬಳಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ ಡಾನ್‌ಬಾಸ್ಕೊ ಶಾಲೆಯ ಪುಟ್ಟ ಕಂದಮ್ಮಗಳ 5 ಮನೆಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಭೀಕರ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಅಪಘಾತದ ತೀವ್ರತೆಗೆ ಕುರುಹಾಗಿ ಉಳಿದಿದ್ದ ವಾಹನಗಳ ಬಿಡಿ ಭಾಗಗಳು, ಮೃತ ಮಕ್ಕಳ ಬ್ಯಾಗ್‌ಗಳು, ಚಪ್ಪಲಿ, ವಾಟರ್ ಬಾಟಲ್‌ಗಳನ್ನು ವೀಕ್ಷಿಸಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಳಿಕ ತ್ರಾಸಿಯಲ್ಲಿರುವ ಡಾನ್‌ಬಾಸ್ಕೊ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಅಧ್ಯಾಪಕರು ಮತ್ತು ಶಾಲಾ ಮಕ್ಕಳ ಹೆತ್ತವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳು ಮತ್ತು ಸರಕಾರದ ಪರವಾಗಿ ಘಟನೆಯ ಬಗ್ಗೆ ಸಂತಾಪ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಮುಂದಕ್ಕೆ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಳಿಕ ಘಟನೆಯಲ್ಲಿ ಮೃತಪಟ್ಟ ಕ್ಲೆರಿಸ್ಸಾ ಮತ್ತು ಕೆಲಿಸ್ಟಾರ ಮೂವತ್ತುಮುಡಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಚಿವರು, ಮನೆಯಲ್ಲಿದ್ದ ಮಕ್ಕಳ ಅಜ್ಜ ಲಾಯ್ಡಾ ಮತ್ತು ತಾಯಿ ರೀಟಾರನ್ನು ಸಂತೈಸಿದರು. ಬಳಿಕ ಪಕ್ಕದಲ್ಲಿರುವ ಅನ್ಸಿಟಾ ಹಾಗೂ ಅಲ್ವಿಟಾರ ಮನೆಗೆ ಭೇಟಿ ನೀಡಿ ಮಕ್ಕಳ ಹೆತ್ತವರಿಗೆ ಸಾಂತ್ವನ ನೀಡಿ ಧೈರ್ಯ ತುಂಬಿದರು. ಬಳಿಕ ಹೆಮ್ಮಾಡಿಯಲ್ಲಿರುವ ರೋಸ್ಟನ್ ಲೋಬೊರ ತಂದೆ ತಾಯಿಯನ್ನು ಭೇಟಿ ಮಾಡಿ ಸಂತೈಸಿದರು. ನಂತರ ಅಲ್ಲೇ ಪಕ್ಕದಲ್ಲಿರುವ ನಿಖಿತಾ ಮತ್ತು ಅನನ್ಯರ ತಂದೆ ಲಾಯ್ಡಾ ಡಿಸಿಲ್ವಾ ಮತ್ತು ತಾಯಿ ಮರೀನಾ ಡಿಸಿಲ್ವಾ ಮತ್ತು ಅಜ್ಜ ಸ್ಟಾನಿ ಡಿಸಿಲ್ವಾರನ್ನು ಸಂತೈಸಿದರು. ಈ ವೇಳೆ ಸ್ಟಾನಿ ಡಿಸೋಜಾ ಅವರು ತಮ್ಮ ಮೊಮ್ಮಕ್ಕಳನ್ನು ನೆನೆದು ಸಚಿವರೆದುರೇ ಗದ್ಗದಿತರಾದರು. ತಮ್ಮ ಮೊಮ್ಮಕ್ಕಳ ನಿಧನದ ಶಾಕ್‌ನಿಂದ ನಾನಿನ್ನೂ ಹೊರಬಂದಿಲ್ಲ ಎಂದು ದುಃಖಿಸಿದರು. ಬಳಿಕ ಪಕ್ಕದಲ್ಲಿದ್ದ ಡೆಲ್ವಿನ್‌ರ ಮನೆಗೆ ಭೇಟಿ ನೀಡಿ ಮನೆಮಂದಿಯನ್ನು ಸಂತೈಸಿ ಧೈರ್ಯ ತುಂಬಿದರು.