×
Ad

ಸೈಂಟ್ ಜೋಕಿಮ್ಸ್ ಚರ್ಚಿನ ಧರ್ಮಗುರುಗಳ ಮೇಲಿನ ಆರೋಪ ಸುಳ್ಳು: ಸೈಮನ್ ಲೂಯಿಸ್ ರೋಡ್ರಿಗಸ್

Update: 2016-06-22 17:20 IST

ಕಡಬ, ಜೂ.22: ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರುಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಕೆಲವು ವ್ಯಕ್ತಿಗಳು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ. ಅಲ್ಲದೆ ಸೈಂಟ್ ಜೋಕಿಮ್ಸ್ ಚರ್ಚ್‌ನಲ್ಲಿ ಹಿತರಕ್ಷಣಾ ವೇದಿಕೆ ಎನ್ನುವ ವೇದಿಕೆಯೇ ಅಸ್ತಿತ್ವದಲ್ಲಿಲ್ಲ ಎಂದು ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಸೈಮನ್ ಲೂಯಿಸ್ ರೋಡ್ರಿಗಸ್ ಸ್ಪಷ್ಟನೆ ನೀಡಿದ್ದಾರೆ.

ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಚ್‌ನಲ್ಲಿ ಈಗ ಇರುವ ಧರ್ಮಗುರುಗಳು ನೇರ ನಡೆನುಡಿಯ ವ್ಯಕ್ತಿತ್ವವುಳ್ಳವರಾಗಿದ್ದು, ಕಳೆದ 13 ವರ್ಷಗಳಿಂದ ಚರ್ಚಿನಲ್ಲಿ ಲೆಕ್ಕಪತ್ರಗಳಿಲ್ಲದೆ ಇರುವುದರಿಂದ ಆಡಿಟ್ ಮಾಡಿಸಿರುವುದು ಕೆಲವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅಲ್ಲದೆ ಬಿಷಪ್‌ರಿಗೆ ಮನವಿ ಮಾಡಿ ಹಣವನ್ನು ಕ್ರೋಢೀಕರಿಸಿಕೊಂಡು ಬಾಕಿಯುಳಿದಿದ್ದ ಕೆಲವು ಕಟ್ಟಡ ಕಾಮಗಾರಿಗಳನ್ನು ಯಾವುದೇ ಮಧ್ಯವರ್ತಿಗಳಿಗೆ ನೀಡದೆ ನೇರವಾಗಿ ಮಾಡಿಸುವುದರಿಂದ ಚರ್ಚಿನ ಹಣವನ್ನು ನುಂಗುತ್ತಿದ್ದವರಿಗೆ ಅವಕಾಶ ಇಲ್ಲದಂತಾಗಿರುವುದರಿಂದ ಕೆರಳಿ ಇಂತಹ ಆಧಾರರಹಿತ ಆರೋಪಗಳನ್ನು ವಾಡುತ್ತಿದ್ದಾರೆ.

ಸದ್ಯದಲ್ಲೇ ಮಂಗಳೂರಿನ ಫಾದರ್ ಮುಲ್ಲರ್ಸ್‌ ವತಿಯಿಂದ ನೂತನ ಆಸ್ಪತ್ರೆಯ ಕಟ್ಟಡ ಕಾಮಗಾರಿಯೂ ನಡೆಯಲಿದ್ದು, ಇವೆಲ್ಲದರಲ್ಲಿ ಧರ್ಮಗುರುಗಳೇ ನೇರವಾಗಿ ಭಾಗಿಯಾಗುತ್ತಿರುವುದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಈ ಹಿಂದೆ ಇದ್ದಂತಹ 3 ಧರ್ಮಗುರುಗಳು ತಮ್ಮ ಕೈಗೊಂಬೆಯಾಗಿಲ್ಲವೆನ್ನುವ ಕಾರಣದಿಂದ ಕುಂಟು ನೆಪವನ್ನು ನೀಡಿ ಇಲ್ಲಿಂದ ವರ್ಗಾಯಿಸಿದ್ದರು. ಅದೇ ರೀತಿ ಇವರನ್ನೂ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಧರ್ಮಗುರುಗಳು ಹೃದಯ ಸಂಬಂಧಿ ಅನಾರೋಗ್ಯದಿಂದಾಗಿ ಔಷಧಿಗಳನ್ನು ಸೇವಿಸುತ್ತಿದ್ದು, ಇದನ್ನೇ ದೊಡ್ಡದಾಗಿಸಿ ಅಮಲು ಪದಾರ್ಥ ಎನ್ನುತ್ತಿದ್ದಾರೆ. ವರ್ಷಪೂರ್ತಿ ಪೂಜೆ ಮಾಡುವ ಧರ್ಮಗುರುಗಳು ಅನಾರೋಗ್ಯದ ಕಾರಣದಿಂದ 2015ರ ಡಿ.27ರಂದು ಪೂಜೆ ಮಾಡಲಾಗಿಲ್ಲ. ಅದನ್ನೇ ನೆಪವಾಗಿಸಿಕೊಂಡು ಮದ್ಯ ಸೇವಿಸಿ ತೂರಾಡುತ್ತಿದ್ದರಿಂದ ಅವರಿಂದ ವಾರದ ಪೂಜೆಯನ್ನು ನಡೆಸಲು ಸಾಧ್ಯವಾಗಿಲ್ಲವೆಂದು ದೂರುತ್ತಿದ್ದಾರೆ. ಆರೋಪ ಮಾಡುವವರು ವರ್ಷದಲ್ಲಿ ಎಷ್ಟು ದಿನ ಪೂಜೆಗೆ ಆಗಮಿಸುತ್ತಾರೆ ಎನ್ನುವುದನ್ನು ವಿಮರ್ಷಿಸಲಿ. ಇನ್ನೊಂದು ಘಟನೆಯಲ್ಲಿ ಯಾವುದೋ ತಪ್ಪು ಮಾಡಿದ್ದರಿಂದ ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯೋರ್ವನಿಗೆ ಶಿಕ್ಷೆ ನೀಡಿರುತ್ತಾರೆ.

ಕಟ್ಟಡ ಸಾಮಾಗ್ರಿ ಖರೀದಿಗಾಗಿ ಧರ್ಮಗುರುಗಳೊಂದಿಗೆ ಡೆನ್ನಿಸ್‌ರು ಹೋಗಿ ಹಿಂತಿರುಗುವಾಗ ಸೈಂಟ್ ಜೋಕಿವ್ಸ್ ಸಂಸ್ಥೆಗೆ ಸಂಬಂಧಿಸಿದ ಜಾಗದಲ್ಲಿ ನಡೆಸಲಿರುವ ಕಾಮಗಾರಿಯ ಬಗ್ಗೆ ವಿವರಿಸಿದ್ದರು. ಆ ಸಂದರ್ದಲ್ಲಿ ಕಟ್ಟಡ ಕಾಮಗಾರಿಯನ್ನು ತನಗೆ ವಹಿಸಿಕೊಡುವಂತೆ ಡೆನ್ನಿಸರು ಧರ್ಮಗುರುಗಳಲ್ಲಿ ಕೇಳಿಕೊಂಡಿದ್ದು, ಅವರು ಆ ಮನವಿಯನ್ನು ನಯವಾಗಿಯೇ ತಿರಸ್ಕರಿಸಿದ್ದರು. ನಂತರ ಇಬ್ಬರೂ ಕಾರಿನಲ್ಲಿ ಆಗಮಿಸಿದ್ದು, ಕಾರನ್ನು ನಿಲ್ಲಿಸುವಾಗ ಪಕ್ಕದಲ್ಲಿದ್ದ ಬೀದಿ ನಾಯಿಗಳನ್ನು ಹೆದರಿಸುವ ಸಲುವಾಗಿ ಕಾರಿನ ಹಿಂದಿನ ಸೀಟಿನಲ್ಲಿದ್ದ ಪರವಾನಗಿಯುತ ಬಂದೂಕನ್ನು ತೆಗೆಯಲು ಯತ್ನಿಸಿದ್ದರು. ಕಾಮಗಾರಿಯನ್ನು ತನಗೆ ವಹಿಸಿಕೊಡದೆ ನೇರವಾಗಿ ಧರ್ಮಗುರುಗಳೇ ನಡೆಸುವುದರಿಂದ ಲಾಭವಿಲ್ಲವೆಂದರಿತು ಡೆನ್ನಿಸರು ಇಂತಹ ಕಟ್ಟು ಕಥೆಯನ್ನು ಸೃಷ್ಟಿಸಿ ಬಿಷಪ್ ಹೌಸ್‌ಗೆ ದೂರನ್ನು ನೀಡಿದ್ದರು. ಆ ದೂರಿನನ್ವಯ ಚರ್ಚ್ ಪಾಲನಾ ಮಂಡಳಿಯ ಕೆಲವು ಸದಸ್ಯರು ಸೇರಿಕೊಂಡು ಮಂಗಳೂರಿನ ಧರ್ಮಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅಲ್ಲಿರುವ ವಿಕಾರ್ ಜನರಲ್‌ರೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಆರೋಪವನ್ನು ನಿರಾಕರಿಸಿದ್ದೆವು.

ಅಲ್ಲದೆ ಕಡಬ ಸೈಂಟ್ ಜೋಕಿವ್ಸ್ ಚರ್ಚ್‌ನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶ್ಯಾಂ ಥೋಮಸ್ ಎಂದು ಕರೆಯಲ್ಪಡುವ ವ್ಯಕ್ತಿಯು ಕೊಂಕಣಿ ಕ್ರೈಸ್ತನಲ್ಲ. ಅವರು ಧರ್ಮಸಬೆಯ ಸದಸ್ಯರೂ ಅಲ್ಲ. ಸ್ವಯಂಘೋಷಿತ ಸೈಂಟ್ ಜೋಕಿಮ್ಸ್ ಚರ್ಚ್‌ನ ಹಿತರಕ್ಷಣಾ ವೇದಿಕೆ ಎನ್ನುವ ವೇದಿಕೆಯೇ ಅಸ್ತಿತ್ವದಲ್ಲಿಲ್ಲ ಎಂದರು. ಚರ್ಚ್ ವ್ಯಾಪ್ತಿಯ ಕುಟುಂಬಗಳೆಲ್ಲ ಧರ್ಮಗುರುಗಳ ವಿರುದ್ಧ ತಿರುಗಿ ಬಿದ್ದಿವೆ ಎನ್ನುವುದು ನಿರಾಧಾರ. ಧರ್ಮಗುರುಗಳಿಗೆ ಅನಾರೋಗ್ಯವಿರುವುದರಿಂದ 2 ತಿಂಗಳ ಕಾಲ ರಜೆಯನ್ನು ಘೋಷಿಸಬೇಕೆಂದು ಅಪೇಕ್ಷಿಸಿ ಚರ್ಚಿನ ಎಲ್ಲಾ ಕುಟುಂಬಗಳ ಸದಸ್ಯರು ತೀರ್ಮಾನವನ್ನು ಕೈಗೊಂಡು ಬಿಷಪರಿಗೆ ಕಳುಹಿಸಿದ್ದಲ್ಲಿ ಮಾತ್ರ ರಜೆ ಘೋಷಣೆಯಾಗುವುದು. ಇದನ್ನೇ ನೆಪವನ್ನಾಗಿಸಿ ಕೆಲವು ಅನಕ್ಷರಸ್ತ ಕುಟುಂಬಗಳ ಸದಸ್ಯರಿಂದ ಸುಳ್ಳು ಹೇಳಿ ಬಿಳಿ ಹಾಳೆಗೆ ಸಹಿ ಮಾಡಿಸಿಕೊಂಡು ಧರ್ಮಗುರುಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅಲ್ಲದೆ ಯುವ ಜನಾಂಗದ ಕೆಲವರು ಚರ್ಚ್ ಪರಿಸರದಲ್ಲಿ ಕುಳಿತುಕೊಂಡು ಮೊಬೈಲ್ ಉಪಯೋಗಿಸುವುದನ್ನು ಧರ್ಮಗುರುಗಳು ವಿರೋಧಿಸಿರುವುದರಿಂದ ಯುವಕ, ಯವತಿಯರೂ ಧರ್ಮಗುರುಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಸೈಮನ್ ಲೂಯಿಸ್ ರೋಡ್ರಿಗಸ್, ಧರ್ಮಸಬಾ ಸದಸ್ಯ ಫ್ರಾನ್ಸಿಸ್ ಬಲ್ಯ, ಪೀಟರ್ ಫೆರ್ನಾಂಡಿಸ್, ಪಾಲನಾ ಮಂಡಳಿ ಸದಸ್ಯೆ ರೋಹಿಲಾ ರೋಡ್ರಿಗಸ್, ವೆರೋನಿಕಾ ಫೆರ್ನಾಂಡಿಸ್ ಹಾಗೂ ಮೇರಿ ರೋಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News