ಬಾಳೆಪುಣಿ: 37 ದಿನಗಳ ಬಳಿಕ ಮನೆಗೆ ಮತ್ತೆ ದೊರಕಿತು ವಿದ್ಯುತ್ ಸಂಪರ್ಕ
Update: 2016-06-22 19:25 IST
ಮಂಗಳೂರು,ಜೂ.22: ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆಯ ನೇರೋಳ್ತಡಿಯ ಪುತ್ತಬ್ಬ ಬ್ಯಾರಿಯವರ ಮನೆಯಲ್ಲಿ 37 ದಿನದ ಬಳಿಕ ಮತ್ತೆ ವಿದ್ಯುತ್ ಬೆಳಕು ಮೂಡಿದೆ.
ಜೂ.19 ರಂದು ‘ವಾರ್ತಾಭಾರತಿ.ಇನ್’ನಲ್ಲಿ ‘ಬಾಳೆಪುಣಿ ನೆರೆಮನೆಯವರ ತಕರಾರು: ಅಂಧಕಾರದಲ್ಲಿ ಕುಟುಂಬ’ ಎಂಬ ಶೀರ್ಷಿಕೆಯಲ್ಲಿ 32 ದಿನಗಳಿಂದ ವಿದ್ಯುತ್ ಇಲ್ಲದೆ ಸಮಸ್ಯೆಗೊಳಗಾದ ಪುತ್ತಬ್ಬ ಬ್ಯಾರಿ ಕುಟುಂಬದ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಇಲಾಖೆ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದು ಇಂದು ಪುತ್ತಬ್ಬ ಬ್ಯಾರಿಯವರ ಮನೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಯಿತು.
ಜಾಗದ ವಿವಾದದ ಬಗ್ಗೆ ಮಾತುಕತೆ ನಡೆಸಿದ ನಂತರ ನೆರೆಮನೆಯವರ ಜಾಗದಲ್ಲಿ ವಿದ್ಯುತ್ ಕಂಬವನ್ನು ಅಳವಡಿಸಲಾಯಿತು. ಇದೀಗ ಪತ್ರಿಕೆಯ ವರದಿಯಿಂದ ಮನೆಗೆ ವಿದ್ಯುತ್ ಸಂಪರ್ಕವಾದ ಬಗ್ಗೆ ಪುತ್ತಬ್ಬ ಬ್ಯಾರಿ ಅವರ ಪುತ್ರ ಅಶ್ರಫ್ ಸಂತಸ ವ್ಯಕ್ತಪಡಿಸಿದ್ದಾರೆ.