×
Ad

ಶಾಲಾ ಮಕ್ಕಳ ವಾಹನಗಳಿಗೆ ಹಳದಿ ಬಣ್ಣ ಕಡ್ಡಾಯ

Update: 2016-06-22 19:36 IST

ಮಂಗಳೂರು, ಜೂ.22: ಖಾಸಗಿ ವಾಹನ ಸೇರಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ, ಟ್ರಿಪ್ ನಡೆಸುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಶಾಲಾ ವಾಹನಗಳ ಸುರಕ್ಷತೆ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಮತ್ತು ಆರ್‌ಟಿಒಗೆ ಸೂಚಿಸಿದರು.

ಶಾಲಾ ವಾಹನಗಳ ಕುರಿತಂತೆ ಜಾರಿಯಲ್ಲಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ಬಗ್ಗೆ ಎಲ್ಲಾ ಶಾಲೆಗಳಿಗೆ ಸೂಚನೆಯನ್ನು ನೀಡಬೇಕು. ಪೋಷಕರಿಗೂ ಶಾಲೆಗಳ ಮೂಲಕ ಮಾಹಿತಿಯನ್ನು ಒದಗಿಸಬೇಕು. ಶಾಲಾ ಮಕ್ಕಳನ್ನು ಕರೆದೊಯ್ಯುವ ಎಲ್ಲಾ ವಾಹನಗಳಿಗೂ ಈ ಬಗ್ಗೆ ಸೂಚನೆಯನ್ನು ರವಾನಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳು ಜೂನ್ 30ರೊಳಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜುಲೈ 1ರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋರಿಕ್ಷಾ- ಓಮ್ನಿಗಳಿಗೆ ಸೂಚನೆ

ಶಾಲಾ ಟ್ರಿಪ್ ನಡೆಸುವ ಆಟೊರಿಕ್ಷಾಗಳಲ್ಲಿ 12 ವರ್ಷಕ್ಕಿಂತ ಕೆಳಗಿನ ಗರಿಷ್ಠ 6 ಮಕ್ಕಳು ಹಾಗೂ ಮಾರುತಿ ಓಮ್ನಿಗಳಲ್ಲಿ ಗರಿಷ್ಠ 8 ಮಕ್ಕಳನ್ನು ಮಾತ್ರ ನಿಯಮಾನುಸಾರ ಸಾಗಿಸಬೇಕಿದೆ. 12 ವರ್ಷಕ್ಕಿಂತ ಮೇಲಿನ ಮಕ್ಕಳನ್ನು ವಾಹನದ ಸೀಟಿನ ಸಾಮರ್ಥ್ಯದಷ್ಟೇ ಕರೆದುಕೊಂಡು ಹೋಗಬೇಕು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಆರ್‌ಟಿಒ ಹಾಗೂ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಕ್ರಮ ಜಾರಿಗೆ ತರಲಾಗುತ್ತಿದ್ದು, ಶಾಲಾ ಆಡಳಿತ ಹಾಗೂ ಪೋಷಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮನವಿ ಮಾಡಿದರು.

ಸಭೆಯಲ್ಲಿ ಆರ್‌ಟಿಒ ಜಿ.ಎಸ್.ಹೆಗಡೆ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ವಾಹನಗಳು ಪಾಲಿಸಬೇಕಾದ ನಿಯಮಗಳು

ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈಗಾಗಲೇ ಜಾರಿಯಲ್ಲಿರುವ ಈ ಕೆಳಗಿನ ನಿಯಮಗಳನ್ನು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

  • ಶಾಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣದಲ್ಲಿರಬೇಕು.
  • ಶಾಲಾ ವಾಹನಗಳ ಹಿಂದೆ ಹಾಗೂ ಮುಂಭಾಗ ಬಾಡಿಗೆಗೆ ಪಡೆದುಕೊಂಡ ವಾಹನವಾಗಿದ್ದಲ್ಲಿ ಸ್ಕೂಲ್‌ಡ್ಯೂಟಿ ಮೇಲೆ ಎಂದು ಸ್ಪಷ್ಟವಾಗಿ ನಮೂದಿಸಬೇಕು.
  • ಶಾಲಾ ವಾಹನದಲ್ಲಿ ಪ್ರಥಮ ಚಿಕಿತ್ಸೆ ಬಾಕ್ಸ್ ಇರಬೇಕು.
  • ಶಾಲಾ ವಾಹನದಲ್ಲಿ ನಿರ್ದಿಷ್ಟಪಡಿಸಿದ ಗುಣಮಟ್ಟದ ಸ್ಪೀಡ್ ಗವರ್ನರ್ ಅಳವಡಿಸಬೇಕು.
  • ವಾಹನದ ಕಿಟಕಿಗಳಲ್ಲಿ ಸಮತಲ ಗ್ರಿಲ್ಸ್‌ಗಳನ್ನು ಅಳವಡಿಸಿರಬೇಕು.
  • ವಾಹನದಲ್ಲಿ ಬೆಂಕಿ ನಂದಿಸುವ ಅಗ್ನಿ ಶಾಮಕ ಇರಬೇಕು.
  • ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ವಾಹನದ ಮೇಲೆ ಬರೆಯಬೇಕು.
  • ವಾಹನದ ಬಾಗಿಲುಗಳಿಗೆ ವಿಶ್ವಾಸಾರ್ಹ ಬೀಗಗಳನ್ನು ಅಳವಡಿಸಿರಬೇಕು.
  • ಶಾಲಾ ಮಕ್ಕಳನ್ನು ನೋಡಿಕೊಳ್ಳಲು ವಾಹನದಲ್ಲಿ ಒಬ್ಬ ಅಟೆಂಡರ್ ಇರಬೇಕು.
  • ವಿದ್ಯಾರ್ಥಿಗಳ ತಂದೆ/ತಾಯಿ, ಪೋಷಕರು/ ಶಾಲಾ ಶಿಕ್ಷಕರು ವಾಹನದಲ್ಲಿನ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ವಾಹನದಲ್ಲಿ ಕುಳಿತು ಪ್ರಯಾಣಿಸಬಹುದು.

ಮಕ್ಕಳ ಸುರಕ್ಷತೆ ಬಗ್ಗೆ ಮುತುವರ್ಜಿ ವಹಿಸಿ: ಭೂಷಣ್ ಜಿ.ಬೊರಸೆ

ಪೊಲೀಸ್ ಇಲಾಖೆ ವತಿಯಿಂದ ಇಂದಿನಿಂದಲೇ ಶಾಲಾ ವಾಹನಗಳ ತಪಾಸಣೆ ಕಾರ್ಯ ಆರಂಭಿಸಲಾಗಿದೆ. ಆಟೊರಿಕ್ಷಾ ಹಾಗೂ ಓಮ್ನಿ ಮೊದಲಾದ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳನ್ನು ಪರಿಶೀಲಿಸಿ, ಚಾಲಕರಿಗೆ ತಿಳಿ ಹೇಳಲಾಗುತ್ತಿದೆ. ಒಂದು ವಾರ ಕಾಲ ಈ ಅಭಿಯಾನ ಮುಂದುವರೆಯಲಿದೆ. ಬಳಿಕ ನಿಯಮ ಪಾಲಿಸದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.

ಗಂಗೊಳ್ಳಿಯಲ್ಲಿ ಮಂಗಳವಾರ ನಡೆದ ಹೃದಯ ವಿದ್ರಾವಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಪಾಲಿಸಬೇಕಾದ ನಿಯಮಗಳ ಕುರಿತಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ನಾವು ಕ್ರಮ ಕೈಗೊಂಡಿಲ್ಲ ಎಂದರೆ ಮುಂದೆ ವ್ಯವಸ್ಥೆ ಬಗ್ಗೆ ಪಶ್ಚಾತ್ತಾಪ ಪಡಬೇಕಾದೀತು. ಮಕ್ಕಳ ಹಿತದೃಷ್ಟಿಯಿಂದ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಕೂಡಾ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಮನವಿ ಮಾಡಿದರು.

ನಗರದಲ್ಲೂ ಅಭಿಯಾನ ಆರಂಭ:​ ಡಿಸಿಪಿ ಶಾಂತರಾಜು

ನಗರದಲ್ಲೂ ಇಂದಿನಿಂದಲೇ ಶಾಲಾ ವಾಹನಗಳ ತಪಾಸಣೆ ಕಾರ್ಯ ಆರಂಭಿಸಲಾಗಿದೆ. ನಗರದ ಹಲವು ಕಡೆ ಆಟೊರಿಕ್ಷಾ ಹಾಗೂ ಓಮ್ನಿ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕವಾಗಿ ಮಕ್ಕಳನ್ನು ಕರೆದೊಯ್ಯುವುದು ಕಂಡುಬಂದಿದೆ. ಈ ಬಗ್ಗೆ ಈಗಾಗಲೇ ವಾಹನಗಳ ಚಾಲಕರಿಗೆ ತಿಳಿ ಹೇಳಲಾಗಿದೆ ಎಂದು ಡಿಸಿಪಿ ಶಾಂತರಾಜು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News