×
Ad

ಖರೀದಿಸುವವರಿಲ್ಲದೆ ಪ್ರತೀದಿನ ವ್ಯರ್ಥವಾಗುತ್ತಿದೆ 40 ಯುನಿಟ್ ವಿದ್ಯುತ್

Update: 2016-06-22 20:38 IST

ಮಂಗಳೂರು, ಜೂ.22: ಮನೆಯಲ್ಲಿ ವಿದ್ಯುತ್ ಉತ್ಪಾದಿಸಿ ಆದಾಯ ಗಳಿಸಿ ಎಂದು ಕರ್ನಾಟಕ ಸರಕಾರದ ಘೋಷಣೆ ಹೆಸರಿಗೆ ಮಾತ್ರ ಸೀಮಿತವಾಗಿದೆ. ನಗರದ ಬಲ್ಮಠ ಬಳಿಯ ಜಯರಾಮ್ ಎಂಬವರು ಸುಮಾರು 9 ಲಕ್ಷ ರೂ. ಖರ್ಚು ಮಾಡಿ ವಿದ್ಯುತ್ ಉತ್ಪಾದನೆ ಆರಂಭಿಸಿದ್ದರೂ ಉತ್ಪಾದನೆಯಾದ ವಿದ್ಯುತನ್ನು ಮೆಸ್ಕಾಂ ಖರೀದಿಸದೆ ವಿದ್ಯುತ್ ಪೋಲಾಗುತ್ತಿದೆ.

ಲಿಟರಿಯಲ್ಲಿ ಕರ್ನಲ್ ಆಗಿ ನಿವೃತ್ತರಾದ ನಂತರ ಇದೀಗ ಎ.ಜೆ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಜಯರಾಮ್ ಅವರು ನಗರದ ಬಲ್ಮಠದಲ್ಲಿರುವ ಮನೆಯಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸೊಲಾರ್ ಪವರ್ ಪ್ಲಾಂಟನ್ನು ಆರಂಭಿಸಿದ್ದರು. ಸೌರ ಶಕ್ತಿಯನ್ನು ಸದ್ಬಳಕೆ ಮಾಡುವ ಬಗ್ಗೆ ವಿಶೇಷ ಆಸಕ್ತಿಯಿರುವ ಜಯರಾಮ್ ಅವರು ಈ ಮೊದಲೆ ತಮ್ಮ ಮನೆಗೆ ಬಿಸಿ ನೀರಿಗೆ ಮತ್ತು ಮನೆಯ ವಿದ್ಯುತ್ ಬಳಕೆಗೆ ಸೊಲಾರ್ ಪ್ಯಾನೆಲನ್ನು ಅಳವಡಿಸಿದ್ದರು.

ಸರಕಾರ ಇತ್ತೀಚೆಗೆ ಮನೆಯಲ್ಲಿಯೆ ವಿದ್ಯುತ್ ಉತ್ಪಾದಿಸಿ ಆದಾಯ ಗಳಿಸಿ ಎಂಬ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಮನೆಯ ತಾರಸಿಯಲ್ಲಿ ಸೋಲಾರ್ ಪ್ಲಾಂಟನ್ನು ಸ್ಥಾಪಿಸಿದ್ದರು.

ಜಯರಾಮ್ ಅವರು ತಮ್ಮ ಮನೆಯಲ್ಲಿ 10 ಕೆ.ವಿ. ಗ್ರಿಡ್ ಸೋಲಾರ್ ಪವರ್ ಪ್ಲಾಂಟ್ ಸಿಸ್ಟಮ್ ಅಳವಡಿಸಿದ್ದು ಇದಕ್ಕಾಗಿ 40 ಸ್ಟಾಂಡರ್ಡ್ ಪ್ಯಾನೆಲ್ ಬಳಕೆ ಮಾಡಲಾಗಿದೆ. ಇದಕ್ಕಾಗಿ ಮನೆಯ ತಾರಸಿಯ ಮೇಲಿನ 1,200 ಚದರಡಿಯನ್ನು ಬಳಕೆ ಮಾಡಲಾಗಿದೆ. ಸೋಲಾರ್ ಪ್ಯಾನೆಲನ್ನು ಅಳವಡಿಸಿ ಮೂರು ತಿಂಗಳು ಆಗುತ್ತಾ ಬಂದರೂ ಮೆಸ್ಕಾಂ ಮಾತ್ರ ವಿದ್ಯುತ್ತನ್ನು ಖರೀದಿಸುತ್ತಿಲ್ಲ. ನಿಯಮದಂತೆ ಸೋಲಾರ್ ಪ್ಲಾಂಟ್ ಅಳವಡಿಸಿದ 45 ದಿನದಲ್ಲಿ ಮೆಸ್ಕಾಂ ವಿದ್ಯುತ್ ಖರೀದಿಯನ್ನು ಮಾಡಬೇಕು. ಆದರೆ 45 ದಿನ ಮುಗಿದು ಮತ್ತೆ 45 ದಿನವಾಗಿದ್ದರೂ ಮೆಸ್ಕಾಂ ವಿದ್ಯುತ್ ಖರೀದಿಸದೆ ಇರುವುದರಿಂದ ಇಲ್ಲಿ ದಿನಂಪ್ರತಿ ಉತ್ಪಾದನೆಯಾಗುವ 40 ಯುನಿಟ್ ವ್ಯರ್ಥವಾಗುತ್ತಿದೆ.

ಜಯರಾಮ್ ಅವರಿಗೆ 10 ಕೆ ವಿ ಸೊಲಾರ್ ಪ್ಯಾನೆಲನ್ನು ಅಳವಡಿಸಲು 8.18 ಲಕ್ಷ ರೂ. ಖರ್ಚಾಗಿದ್ದು ಮನೆಯಿಂದ ವಿದ್ಯುತನ್ನು ಮೆಸ್ಕಾಂಗೆ ಕೊಂಡೊಯ್ಯಲು ಬೇಕಾದ ತಂತಿಯನ್ನು ಅಳವಡಿಸಲು ಹೆಚ್ಚುವರಿ 70 ಸಾವಿರ ಖರ್ಚಾಗಿದೆ. ಆದರೆ ಇಷ್ಟೆಲ್ಲಾ ಖರ್ಚು ಮಾಡಿದರೂ ಮೆಸ್ಕಾಂ ಇಲಾಖೆ ವಿದ್ಯುತನ್ನು ಖರೀದಿಸದೆ ಇರುವುದರಿಂದ ಜಯರಾಮ್ ಅವರು ಅಳವಡಿಸಿದ ಸೋಲಾರ್ ಪ್ಲಾಂಟ್ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ.

ಜಯರಾಮ್ ಅವರು ಸೋಲಾರ್ ಪವರ್ ಪ್ಲಾಂಟ್ ಅಳವಡಿಸಿದ ಸಂದರ್ಭದಲ್ಲಿ ಸರಕಾರದ ಪ್ರತಿ ಯುನಿಟ್‌ಗೆ ರೂ. 9.56 ರೂ. ನೀಡಿ ಖರೀದಿಸುವ ಯೋಜನೆಯನ್ನು ರೂಪಿಸಿತ್ತು. ಇದರ ಪ್ರಕಾರ ಸೋಲಾರ್ ಪ್ಲಾಂಟ್ ಅಳವಡಿಸಿದ ಬಳಕೆದಾರ ತಾನು ಬಳಕೆ ಮಾಡಿದ ವಿದ್ಯುತ್‌ಗೆ ಪ್ರತಿ ಯುನಿಟ್‌ಗೆ 9.56 ರೂ. ಅಳವಡಿಸಬೇಕಿತ್ತು. ಆದರೆ ಮೇ 1ರಂದು ಈ ನಿಯಮವನ್ನು ಬದಲಿಸಿದ ಸರಕಾರ ಖರೀದಿಸುವ ಪ್ರತಿ ಯುನಿಟಿಗೆ ರೂ.7.08 ನೀಡುವುದು ಮತ್ತು ಸೋಲಾರ್ ಅಳವಡಿಸಿದ ಬಳಕೆದಾರನಿಗೆ ಅವರು ಬಳಸಿದ ವಿದ್ಯುತ್‌ಗೆ ಇತರ ಗ್ರಾಹಕರಂತೆ ವಿದ್ಯುತ್ ದರವನ್ನು ವಿಧಿಸುವುದಾಗಿ ಹೇಳಿತ್ತು. ಈ ಬದಲಾವಣೆ ಮಾಡಿರುವುದನ್ನು ಮೆಸ್ಕಾಂ ಇಲಾಖೆ ವಿಳಂಬ ಮಾಡುತ್ತಿರುವುದರಿಂದಲೆ ಈ ಸಮಸ್ಯೆಗೆ ಕಾರಣವಾಗಿದೆ.

ಸೋಲಾರ್ ಪವರ್ ಪ್ಲಾಂಟ್ ಸಿಸ್ಟಮ್‌ನ ಹೊಸ ಪವರ್ ಪರ್ಚೆಸ್ ಅಗ್ರೀಮೆಂಟ್ ಇನ್ನು ನಮಗೆ ಬಂದಿಲ್ಲ. ಅದು ಬಂದ ತಕ್ಷಣ ಈ ಸಮಸ್ಯೆ ಬಗೆಹರಿಯಲಿದೆ.
- ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ ಮಂಗಳೂರು ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News