×
Ad

ಪುತ್ತೂರು ನಗರಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದ ಸದಸ್ಯರ ಮೇಲ್ಮನವಿ ವಜಾ

Update: 2016-06-22 21:40 IST

ಪುತ್ತೂರು, ಜೂ.22:ವಿಪ್ ಉಲ್ಲಂಘನೆ ಪ್ರಕರಣದಲ್ಲಿ ನಗರಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದ ಪುತ್ತೂರು ನಗರಸಭೆಯ ಆರು ಸದಸ್ಯರ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ವಜಾ ಮಾಡಿದೆ.

ನಗರಸಭಾ ಸದಸ್ಯರಾದ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ನವೀನ್ ಚಂದ್ರ ನಾಯ್ಕಿ, ಸೀಮಾ ಗಂಗಾಧರ್, ರೇಖಾ ಯಶೋಧರ, ದೀಕ್ಷಾ ಪೈ, ಕಮಲ ಆನಂದ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿದ್ದ ದ.ಕ. ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರ ತಂಡ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಭಾಗೀಯ ಪೀಠವು ಎಂಟು ವಾರಗಳ ಕಾಲ ತೀರ್ಪಿಗೆ ತಡೆ ನೀಡಿತ್ತು. ಇದೀಗ ಮತ್ತೆ ವಿಚಾರಣೆಗೆ ಸ್ವೀಕರಿಸಿದ ವಿಭಾಗೀಯ ಪೀಠ ಮೇಲ್ಮನವಿ ಅರ್ಜಿಯನ್ನೇ ವಜಾ ಮಾಡಿದೆ.

ನಮ್ಮ ಮೇಲ್ಮನವಿ ವಜಾಗೊಂಡಿರುವುದರಿಂದ ಮುಂದೇನು ಮಾಡಬೇಕು ಎಂಬ ಬಗ್ಗೆ ಎಲ್ಲ ಆರು ಮಂದಿ ಸಮಾಲೋಚನೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ದೂರುದಾರರಾದ ಹಾಲಿ ನಗರಸಭಾ ಸದಸ್ಯ ಎಚ್.ಮುಹಮ್ಮದ್ ಅಲಿ ಪ್ರತಿಕ್ರಿಯೆ ನೀಡಿ, ಪಕ್ಷದ ವಿಪ್ ಉಲ್ಲಂಘಿಸಿದ ಪ್ರಕರಣದಲ್ಲಿ ನಡೆಸಿದ ನ್ಯಾಯಾಂಗ ಹೋರಾಟದಲ್ಲಿ ನಮಗೆ ಜಯ ಸಿಕ್ಕಿರುವುದು ಖುಷಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪುತ್ತೂರು ಪುರಸಭೆಯಾಗಿದ್ದ ಸಂದರ್ಭ 2014ರಲ್ಲಿ ಅಧ್ಯಕ್ಷತೆಗೆ ನಡೆದ ಚುನಾವಣೆಯ ವೇಳೆ ಆರು ಸದಸ್ಯರು ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಅಧಿಕೃತ ಅ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದರು ಎಂದು ಆಪಾದಿಸಿ ಅಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಯಗೊಂಡಿದ್ದ ಎಚ್.ಮುಹಮ್ಮದ್ ಅಲಿ ಅವರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

2015ರ ಮೇ 7ರಂದು ತೀರ್ಪು ನೀಡಿದ್ದ ನ್ಯಾಯಾಲಯ, ಆರು ಮಂದಿಯ ಸದಸ್ಯತ್ವ ರದ್ದುಗೊಳಿಸಿ ತೀರ್ಪು ನೀಡಿತ್ತು. ಇದರ ವಿರುದ್ಧ ಆರು ಜನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇ 19ರಂದು ಅನರ್ಹತೆ ತೀರ್ಪಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. 2016ರ ಮಾರ್ಚ್ 29ರಂದು ಅಂತಿಮ ತೀರ್ಪು ನೀಡಿದ ಹೈಕೋರ್ಟ್, ಜಿಲ್ಲಾಧಿಕಾರಿ ಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿತ್ತು.

ಇದರ ವಿರುದ್ಧ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರ ತಂಡ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಎ.25ರಂದು ವಿಭಾಗೀಯ ಪೀಠ ಎಂಟು ವಾರಗಳ ತಡೆ ನೀಡಿತ್ತು. ಇದೀಗ ಮೇಲ್ಮನವಿ ಅರ್ಜಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News