ಪುತ್ತೂರು: ನಗರಸಭೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಸಚಿವ ರೈಗೆ ಮನವಿ
ಪುತ್ತೂರು, ಜೂ.22: ಪುತ್ತೂರು ನಗರಸಭೆಯ ಅಧ್ಯಕ್ಷೆ, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಅನುದಾನ ಹೆಚ್ಚು ಮಾಡುವಂತೆ ಹಾಗೂ ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು.
ನಗರ ಸಭೆಗೆ ಹೆಚ್ಚಿನ ಅನುದಾನ ದೊರಕಿಸಿಕೊಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಕುಡ್ಸೆಂಪ್ ಕುಡಿಯುವ ನೀರು ಯೋಜನೆ ಹಾಗೂ ಒಳಚರಂಡಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕು. 94ಸಿಸಿಯಡಿಯಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿರುವವರಿಗೆ ಗರಿಷ್ಠ 0.05 ಎಕ್ರೆ ನೀಡಬೇಕು ಎಂದು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಇವರ ನೇತೃತ್ವದಲ್ಲಿ ನಗರಸಭಾ ಸದಸ್ಯ ಎಚ್. ಮುಹಮ್ಮದ್ ಅಲಿ, ನಾಮನಿರ್ದೇಶಿತ ಸದಸ್ಯ ಕೇಶವ ಪೂಜಾರಿ, ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಉಪಾಧ್ಯಕ್ಷ ಕೊರಗಪ್ಪ ಬನ್ನೂರು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಮಾಜಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ನಿಯೋಗದಲ್ಲಿದ್ದರು.