ತ್ರಾಸಿ ದುರಂತದಲ್ಲಿ ಮಡಿದ ಕಂದಮ್ಮಗಳ ಗೌರವಾರ್ಥ ಹೆಮ್ಮಾಡಿ ಬಂದ್
Update: 2016-06-22 22:05 IST
ಕುಂದಾಪುರ, ಜೂ.22: ತ್ರಾಸಿಯ ಮೊವಾಡಿ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಜೀವತೆತ್ತ ವಿದ್ಯಾರ್ಥಿಗಳ ಗೌರವಾರ್ಥವಾಗಿ ಬುಧವಾರ ಹೆಮ್ಮಾಡಿ ಪೇಟೆಯಲ್ಲಿ ಸ್ವಯಂ ಪೇರಿತ ಬಂದ್ ಆಚರಿಸಲಾಯಿತು.
ಬೆಳಗ್ಗೆಯಿಂದಲೇ ಹೆಮ್ಮಾಡಿ ಗ್ರಾಪಂ ವ್ಯಾಪ್ತಿಯ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರೆಯದೆ ಮೃತ ಜೀವಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅದೇ ರೀತಿ ಹೆಮ್ಮಾಡಿಯ ಆಟೋ ಚಾಲಕ ಮತ್ತು ಮಾಲಕರ ಸಂಘದವರು ತಮ್ಮ ಆಟೊಗಳನ್ನು ರಸ್ತೆಗೆ ಇಳಿಸದೆ ಮೃತರಿಗೆ ಗೌರವ ಅರ್ಪಿಸಿದರು.
ಇದರಿಂದ ಹೆಮ್ಮಾಡಿ ಪೇಟೆ ಬೀಕೋ ಅನ್ನುತ್ತಿತ್ತು. ಅಲ್ಲದೆ ಇಡೀ ಗ್ರಾಮದಲ್ಲಿ ಸ್ಮಶಾನ ವೌನ ಆವರಿಸಿತ್ತು. ಸುಳ್ಸೆ ಹಾಗೂ ಮೂವತ್ತುಮುಡಿ ಪ್ರದೇಶಗಳಲ್ಲಿ ಕಪ್ಪು ಬಾವುಟ ಹಾರಿಸುವ ಮೂಲಕ ಅಲ್ಲಿನ ಸ್ಥಳಯ ಸಂಘಟನೆಯ ಪದಾಧಿಕಾರಿಗಳು ಕರಾಳ ದಿನವನ್ನು ಆಚರಿಸಿದರು.