ಬ್ರಿಟನ್‌ನ ಡಿಜಿಟಲ್ ಸಂಗ್ರಹದಲ್ಲಿ 6 ಭಾರತೀಯ ಯುದ್ಧ ಹೀರೋಗಳು
ಲಂಡನ್, ಜೂ. 22: ಮೊದಲ ಮಹಾಯುದ್ಧದ ಶತಮಾನೋತ್ಸವ ಆಚರಿಸುವ ಬ್ರಿಟನ್ ಸರಕಾರದ ಯೋಜನೆಯ ಭಾಗವಾಗಿ, ಯುದ್ಧ ಪರಾಕ್ರಮಿಗಳ ಕತೆಗಳನ್ನು ಹೇಳುವ ನೂತನ ಡಿಜಿಟಲ್ ಸಂಗ್ರಹವೊಂದನ್ನು ಬ್ರಿಟನ್ ಆರಂಭಿಸಿದೆ. ಇದರಲ್ಲಿ ಆರು ಭಾರತೀಯರ ಸಾಹಸಗಾಥೆಗಳೂ ಇವೆ.
ಮೊದಲ ಮಹಾಯುದ್ಧದಲ್ಲಿ 11 ವಿದೇಶಗಳ 175 ಮಂದಿಗೆ ಶೌರ್ಯಕ್ಕಾಗಿ ನೀಡುವ ಬ್ರಿಟನ್‌ನ ಅತ್ಯುನ್ನತ ಪ್ರಶಸ್ತಿ ‘ವಿಕ್ಟೋರಿಯ ಕ್ರಾಸ್’ನ್ನು ನೀಡಲಾಗಿದೆ. ಈ ಪೈಕಿ ಆರು ಮಂದಿ ಅವಿಭಜಿತ ಭಾರತದ ಆರು ಸೈನಿಕರು. ಅವರು ಬ್ರಿಟಿಶ್ ಭಾರತೀಯ ಸೇನೆಯ ಭಾಗವಾಗಿ ಯುದ್ಧದಲ್ಲಿ ಹೋರಾಡಿದರು. 2014ರಲ್ಲಿ ಭಾರತಕ್ಕೆ ನೀಡಲಾದ ಸ್ಮರಣಾ ಫಲಕದಲ್ಲಿ ಅವರನ್ನು ಗೌರವಿಸಲಾಗಿತ್ತು.
‘‘ಸ್ಮಾರಕ ಫಲಕದಲ್ಲಿ ಕೆತ್ತಲಾದ ಪ್ರತಿ ಹೆಸರಿನ ಹಿಂದೆ ಒಂದು ಅಸಾಮಾನ್ಯ ಕತೆಯಿದೆ. ಈ ಡಿಜಿಟಲ್ ಸಂಗ್ರಹದಲ್ಲಿ ವಿದೇಶಗಳ ವಿಕ್ಟೋರಿಯ ಕ್ರಾಸ್ ವಿಜೇತ ಸೈನಿಕರನ್ನು ಜೊತೆಗೆ ತರುವ ಮೂಲಕ ಇಲ್ಲಿ ಅವರಿಗೆ ಸೂಕ್ತ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗಿದೆ’’ ಎಂದು ವಿದೇಶ ಮತ್ತು ಕಾಮನ್‌ವೆಲ್ತ್ ಕಚೇರಿ (ಎಫ್‌ಸಿಒ) ಸಚಿವ ಹ್ಯೂಗೊ ಸ್ವಯರ್ ಹೇಳಿದರು.
ಡಿಜಿಟಲ್ ಸಂಗ್ರಹದಲ್ಲಿರುವ ಆರು ಭಾರತೀಯ ಸೈನಿಕರ ವಿವರ ಇಂತಿದೆ: ಪಂಜಾಬ್‌ನ ರಿಸಲ್ದಾರ್ ಬದ್ಲು ಸಿಂಗ್, ಉತ್ತರಪ್ರದೇಶದ ಸಿಪಾಯಿ ಚತ್ತಾ ಸಿಂಗ್, ಈಗಿನ ಉತ್ತರಾಖಂಡದ ನಾಯಕ್ ದರ್ವಾನ್ ಸಿಂಗ್ ನೇಗಿ ಮತ್ತು ರೈಫಲ್‌ಮನ್ ಗಬರ್ ಸಿಂಗ್ ನೇಗಿ, ರಾಜಸ್ಥಾನದ ಲ್ಯಾನ್ಸ್ ದಫೇದಾರ್ ಗೋಬಿಂದ್ ಸಿಂಗ್ ಮತ್ತು ಹಿಮಾಚಲಪ್ರದೇಶದ ಲ್ಯಾನ್ಸ್ ನಾಯಕ್ ಲಾಲ.
ಪಾಕಿಸ್ತಾನ, ನೇಪಾಳ, ಕೆನಡ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕ, ಅಮೆರಿಕ, ಡೆನ್ಮಾರ್ಕ್, ಬೆಲ್ಜಿಯಂ ಮತ್ತು ಯುಕ್ರೇನ್ ದೇಶಗಳ ಸೈನಿಕರ ಕತೆಗಳೂ ಡಿಜಿಟಲ್ ಸಂಗ್ರಹದಲ್ಲಿವೆ.
ಮೊದಲ ಮಹಾಯುದ್ಧದಲ್ಲಿ ಬ್ರಿಟನ್ ಪ್ರವೇಶಕ್ಕೆ 2014 ಆಗಸ್ಟ್‌ಗೆ 100 ವರ್ಷಗಳು ತುಂಬಿದ್ದವು.