×
Ad

ಉತ್ತರಪ್ರದೇಶ ದೇಶದಲ್ಲೇ ಅತ್ಯಂತ ಅಸುರಕ್ಷಿತ ಪ್ರದೇಶ: ಉಮಾಭಾರತಿ

Update: 2016-06-22 23:03 IST

ಜೈಪುರ, ಜು.22: ಉತ್ತರಪ್ರದೇಶವು ದೇಶದಲ್ಲಿಯೇ ಅತ್ಯಂತ ಅಸುರಕ್ಷಿತ ಸ್ಥಳವಾಗಿದೆ. ಕೈರಾನಾ ವಿವಾದವು ರಾಜ್ಯದ ‘ಕೆಟ್ಟ ಮುಖದ’ ಒಂದು ತುಣುಕಷ್ಟೇ ಆಗಿದೆಯೆಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಮಂಗಳವಾರ ವ್ಯಾಖ್ಯಾನಿಸಿದ್ದಾರೆ.

ದೇಶದ ನಾಗರಿಕರಿಗೆ ಇಂದು ಉತ್ತರಪ್ರದೇಶವು ಅತ್ಯಂತ ಅಸುರಕ್ಷಿತ ಸ್ಥಳವಾಗಿದೆ. ಅಲ್ಲಿ, ಕೆಲವರು ಜಾತೀಯತೆಯಿಂದ, ಕೆಲವು ಕೋಮುವಾದದಿಂದ ಹಾಗೂ ಇನ್ನೂ ಕೆಲವು ಕಾನೂನು-ಸುವ್ಯವಸ್ಥೆ ಸಮಸ್ಯೆಯಿಂದಾಗಿ ವಲಸೆ ಹೋಗುತ್ತಿದ್ದಾರೆ. ಜಮ್ಮು-ಕಾಶ್ಮೀರಕ್ಕಿಂತ ಹೆಚ್ಚು ಅಸುರಕ್ಷಿತ ಭಾವನೆ ಜನರಲ್ಲಿರುವ ರಾಜ್ಯವೆಂದರೆ ಉತ್ತರಪ್ರದೇಶವಾಗಿದೆಯೆಂದು ಅವರು ಜೈಪುರದಲ್ಲಿ ಪತ್ರಕರ್ತರೊಡನೆ ಹೇಳಿದರು.
ಕಾನೂನು-ಸುವ್ಯವಸ್ಥೆಯ ಸಮಸ್ಯೆಯಿಂದಾಗಿ ಉತ್ತರಪ್ರದೇಶದ ಅನೇಕ ಗ್ರಾಮಗಳು ಹಾಗೂ ಪಟ್ಟಣಗಳಿಂದ ಜನರು ಗುಳೇ ಹೋಗಿದ್ದಾರೆ. ಕೈರಾನಾ ರಾಜ್ಯದ ಕೆಟ್ಟ ಮುಖದ ಒಂದು ಕಿರು ನೋಟವಷ್ಟೇ ಎಂದು ಉಮಾಭಾರತಿ ಆರೋಪಿಸಿದರು.
ಕೈರಾನದಿಂದ ಹಿಂದೂ ಕುಟುಂಬಗಳು ವಲಸೆ ಹೋಗಿವೆಯೆಂಬ ವಿಚಾರದಲ್ಲಿ ಬಿಜೆಪಿ ಹಾಗೂ ಎಸ್ಪಿ ಪರಸ್ಪರ ಕೆಸರೆರಚಾಡಿಕೊಳ್ಳುತ್ತಿವೆ.
ಉಮಾಭಾರತಿ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಓಂ ಮಾಥುರ್‌ರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಚುನಾವಣೆ ನಡೆಯಲಿರುವ ಉತ್ತರಪ್ರದೇಶದ ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು.
ಇಬ್ಬರು ಪೊಲೀಸ್ ಅಧಿಕಾರಿಗಳು ಸಹಿತ 29 ಮಂದಿಯ ಸಾವಿಗೆ ಕಾರಣವಾಗಿದ್ದ ಮಥುರಾ ಹಿಂಸಾಚಾರವನ್ನುಲ್ಲೇಖಿಸಿ ಮಾಥುರ್ ಕೂಡಾ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ಅಖಿಲೇಶ್ ಯಾದವ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆಯೇ ಇಲ್ಲ. ಪೊಲೀಸ್ ಅಧಿಕಾರಿಗಳನ್ನೇ ಗುಂಡಿಟ್ಟು ಕೊಲ್ಲಲಾಗುತ್ತಿದೆ. ಇತರ ಘಟನೆಗಳೂ ನಡೆಯುತ್ತಿವೆಯೆಂದು ಅವರು ಆರೋಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News