ಗುಲ್ಬರ್ಗ ರ್ಯಾಗಿಂಗ್ ಸಂತ್ರಸ್ತೆಯ ಆಘಾತಕಾರಿ ಪತ್ರ ಬಹಿರಂಗ

Update: 2016-06-23 07:25 GMT

ಕೊಝಿಕ್ಕೋಡ್, ಜೂ.23: ಗುಲ್ಬರ್ಗಾದ ಅಲ್ ಖಮರ್ ನರ್ಸಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿಯರ ಕೈಯಲ್ಲಿ ರ್ಯಾಗಿಂಗ್‌ಗೆ ಒಳಗಾಗಿ ಬಲವಂತದಿಂದ ಟಾಯ್ಲೆಟ್ ಕ್ಲೀನರ್ ಕುಡಿದಿದ್ದಾಳೆನ್ನಲಾದ 19 ವರ್ಷದ ಅಶ್ವತಿ ಈಗ ಕೊಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡಲು ಪ್ರಯತ್ನ ಪಡುತ್ತಿದ್ದಾಳೆ. ಟಾಯ್ಲೆಟ್ ಕ್ಲೀನರ್ ಪ್ರಭಾವದಿಂದ ಆಕೆಯ ಅನ್ನ ನಾಳ ಸುಟ್ಟು ಹೋಗಿದ್ದು ಆಕೆಯ ಈ ಸ್ಥಿತಿಗೆ ಕಾರಣವೇನೆಂದು ತಿಳಿಯುವ ಪ್ರಯತ್ನವನ್ನು ಕರ್ನಾಟಕ ಮತ್ತು ಕೇರಳ ಪೊಲೀಸರು ಮಾಡುತ್ತಿದ್ದಾರೆ.

ಹಿರಿಯ ವಿದ್ಯಾರ್ಥಿನಿಯರು ತನಗೆ ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಫಿನಾಯಿಲ್ ಕುಡಿಸಿದ್ದರೆಂದು ಆರೋಪಿಸಿರುವ ಅಶ್ವತಿ ತನ್ನ ವಕೀಲರಿಗೆ ಪತ್ರ ಬರೆದು ತನಗಾದ ಘೋರ ಅನುಭವವನ್ನು ವಿವರಿಸಿದ್ದಾಳೆ. ಆಕೆಯ ಮೈಬಣ್ಣಕ್ಕೆ ತಮಾಷೆ ಮಾಡಿ ಆಕೆ ಚಿಕ್ಕವಳಿರುವಾಗಲೇ ಕುಟುಂಬವನ್ನು ತ್ಯಜಿಸಿ ಹೋಗಿದ್ದ ಆಕೆಯ ತಂದೆಯ ವಿಚಾರದಲ್ಲೂ ಆಕೆಯನ್ನು ವಿದ್ಯಾರ್ಥಿಗಳು ನಿಂದಿಸಿದ್ದರೆನ್ನಲಾಗಿದೆ.

‘‘ಡಿಸೆಂಬರ್ 2015 ರಿಂದ ಮೇ 2016 ರ ತನಕ ಕಾಲೇಜಿಗೆ ಹೋದ ನಾನು ಕೆಲ ಮೂರನೆ ವರ್ಷದ ವಿದ್ಯಾರ್ಥಿಗಳು ನೀಡುತ್ತಿದ್ದ ಮಾನಸಿಕ ಹಿಂಸೆ ತಡೆಯಲಾರದೆ ಶಿಕ್ಷಣ ನಿಲ್ಲಿಸಬೇಕಾಯಿತು. ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗೆ ದಿನದಲ್ಲಿ ಹಲವು ಬಾರಿ ವಿಶ್ ಮಾಡಬೇಕು ಹಾಗೆ ಮಾಡಿಲ್ಲದಿದ್ದಲ್ಲಿ ಅವರಿಗೆ ಗಂಟೆಗಟ್ಟಲೆ ಬೈಗುಳ ದೊರೆಯುತ್ತಿತ್ತು.

ಹಲವು ಬಾರಿ ನಾನು ಮತ್ತು ನನ್ನ ರೂಮ್‌ಮೇಟ್ ಹಿರಿಯ ವಿದ್ಯಾರ್ಥಿಗಳ (ಎಲ್ಲಾ ಕೇರಳದವರು) ಅಪ್ಪಣೆಯಂತೆ ಮೊಣಕಾಲೂರಿ ನಡೆಯಬೇಕಿತ್ತು ಅಥವಾ ಕಪ್ಪೆಗಳ ಥರ ಜಿಗಿಯಬೇಕಿತ್ತು. ಇದನ್ನೆಲ್ಲಾ ಹೇಗೋ ಸಹಿಸಬಹುದಿತ್ತು. ಆದರೆ ಮೇ 9 ರ ರಾತ್ರಿ ನಡೆದಿದ್ದು ಸಹಿಸಲಸಾಧ್ಯವಾಗಿತ್ತು. ಇಬ್ಬರು ಸೀನಿಯರ್ ವಿದ್ಯಾರ್ಥಿಗಳು ನನ್ನನ್ನು ಹಾಗೂ ನನ್ನ ರೂಮ್‌ಮೇಟನ್ನು ತಮ್ಮ ಕೋಣೆಗೆ ಬರ ಹೇಳಿದರು. ಅಲ್ಲಿ ಐದು ಮಂದಿಯಿದ್ದರು. ನಮ್ಮನ್ನು ನೋಡಿದ ಕೂಡಲೇ ನಮ್ಮಲ್ಲೊಬ್ಬಳು ರಜೆಯ ಮೇಲೆ ಹೋಗುತ್ತಿದ್ದೇವೆಯೇ ಎಂದು ಪ್ರಶ್ನಿಸಿ ಬೊಬ್ಬೆ ಹೊಡೆದು ನಮ್ಮನ್ನು ನಿಂದಿಸಲಾರಂಭಿಸಿದರು,’’ ಎಂದು ಅಶ್ವತಿ ಬರೆದಿದ್ದಾಳೆ.

‘‘ಸಮಯ ಕಳೆದಂತೆಲ್ಲಾ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನಮಗೆ ಇಷ್ಟವಾದ ಹಾಗೂ ಇಷ್ಟವಿಲ್ಲದ ಹಿರಿಯ ವಿದ್ಯಾರ್ಥಿನಿಯರ ಹೆಸರು ಬರೆಯಲು ತಿಳಿಸಿದರು. ನಾನು ಧೈರ್ಯದಿಂದ ನಮ್ಮನ್ನು ಬರ ಹೇಳಿದ ಇಬ್ಬರು ವಿದ್ಯಾರ್ಥಿನಿಯರ ಹೆಸರು ಬರೆದು ಬಿಟ್ಟೆ. ಅವರಿಗೆ ಸಿಟ್ಟು ಬಂದು ನನ್ನ ಕಪ್ಪು ಬಣ್ಣವನ್ನು ತೆಗಳಿದರು ಹಾಗೂ ನನ್ನ ತಂದೆ ನನ್ನನ್ನು ಹಾಗೂ ನನ್ನ ತಾಯಿಯನ್ನು ತೊರೆದು ಹೋಗಿದ್ದರಲ್ಲಿ ಆಶ್ಚರ್ಯವಿಲ್ಲ ಎಂದರು.

‘‘ನಮಗೆ ಅಲ್ಲಿಂದ ಹೊರ ಹೋಗಲು ಹೇಳಲಾಯಿತು ಹಾಗೂ ನಮ್ಮ ಕೋಣೆಯ ಬಾಗಿಲು ಕಿಟಿಕಿಗಳನ್ನು ತೆರೆದಿಡಲು ಹೇಳಲಾಯಿತು. ಸ್ವಲ್ಪ ಹೊತ್ತಿನಲ್ಲಿ ಚೇಚಿ (ಹಿರಿಯ ಸಹೋದರಿಯರು) ನಮ್ಮ ಕೋಣೆಗೆ ನುಗ್ಗಿ ನನ್ನ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದರು. ಆಗ ನಾನು ಉಸಿರಾಡಲು ಕಷ್ಟಪಟ್ಟು ನೆಲಕ್ಕುರುಳಿದೆ. ನನ್ನ ಬೊಬ್ಬೆ ಕೇಳಿ ಓಡಿ ಬಂದ ಇತರ ಹಿರಿಯ ವಿದ್ಯಾರ್ಥಿನಿಯರು ನನ್ನ ಬಾಯಿಗೆ ಕೈಹಾಕಿ ನಾನು ನುಂಗಿದ್ದ ದ್ರವವನ್ನು ವಾಂತಿ ಮಾಡುವಂತೆ ಪ್ರಯತ್ನಿಸಿದರು. ಅಂದಿನಿಂದ ನನ್ನನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ನಾನು ನರಳುತ್ತಾ ಇದ್ದೇನೆ. ನನಗೆ ನ್ಯಾಯ ಬೇಕು,’’ಎಂದು ಅಶ್ವತಿ ಬರೆದಿದ್ದಾರೆ.

ಆಕೆಯ ಪತ್ರದ ಪ್ರತಿಗಳನ್ನು ಕರ್ನಾಟಕ ಹಾಗೂ ಕೇರಳ ಮುಖ್ಯಮಂತ್ರಿಗಳಿಗೂ ಕಳುಹಿಸಲಾಗಿದೆ.

ಕೃಪೆ : ದಿ ನ್ಯೂಸ್‌ಮಿನಿಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News