×
Ad

ಅಧಿಕಾರ ಹಸ್ತಾಂತರಿಸಿಲ್ಲ: ಪ್ರತಿ ವಾದ

Update: 2016-06-23 13:34 IST

ಮಂಗಳೂರು,ಜೂ.22: ಸೂರಿಂಜೆ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಕುರಿತಾದ ವಿವಾದಕ್ಕೆ ಸಂಬಂಧಿಸಿ ಇಂದು ಪತ್ರಿಕಾಗೋಷ್ಠಿ ನಡೆಸಿರುವ ಮಸೀದಿ ಜಮಾಅತ್ ಕಮಿಟಿ ಪದಾಧಿಕಾರಿಗಳು, ಈವರೆಗೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ (ವಕ್ಫ್ ಮಂಡಳಿ)ಗೆ ಆಡಳಿತವನ್ನು ಹಸ್ತಾಂತರಿಸಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಮಸೀದಿಯ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ, ಮಸೀದಿಯಲ್ಲಿ ಪ್ರಸ್ತುತ ಜಮಾಅತ್ ಕಮಿಟಿ ಆಡಳಿತದಲ್ಲಿದೆ ಎಂದರು.

ಇತ್ತೀಚೆಗೆ ಅಬ್ದುಲ್ ಹಮೀದ್ ಕೃಷ್ಣಾಪುರ ಎಂಬವರು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಅವರು ಆಡಳಿತ ನಮ್ಮ ಕೈಯ್ಯಲ್ಲಿದೆ ಲೆಕ್ಕಪತ್ರಗಳನ್ನು ಹಸ್ತಾಂತರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಡಳಿತ ಅವರ ಕೈಯ್ಯಲ್ಲಿದ್ದರೆ, ಲೆಕ್ಕಪತ್ರಗಳನ್ನು ಹಸ್ತಾಂತರಿಸುವ ಪ್ರಮೇಯ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ ಅವರು, ಸೂರಿಂಜೆ ಮಸೀದಿ ಆಡಳಿತವು ಉಸ್ಮಾನ್ ಅಬ್ದುಲ್ಲಾ ನೇತೃತ್ವದ ಜಮಾಅತ್ ಕಮಿಟಿ ಆಡಳಿತದಲ್ಲಿದೆ ಎಂದರು.

ಮಸೀದಿಯಲ್ಲಿ ನಡೆದ ಮಹಾಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಅದರಲ್ಲಿ ಉಸ್ಮಾನ್ ಅಬ್ದುಲ್ಲಾರವರು ಬಹುಮತದಿಂದ ಚುನಾಯಿತರಾಗಿದ್ದರು. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಟಿ. ಸಯ್ಯರ್‌ರವರು ಆರು ಮಂದಿಯನ್ನು ಸೇರಿ ಕರ್ನಾಟಕ ವಕ್ಫ್ ಮಂಡಳಿಗೆ ತಪ್ಪು ಮಾಹಿತಿ ನೀಡಿ ಅಬ್ದುಲ್ ಹಮೀದ್ ಕೃಷ್ಣಾಪುರ ಎಂಬವರನ್ನು ಅಧಿಕಾರಿಯಾಗಿ ಮೇಲಿನ ಏಳು ಜನರನ್ನು ಸದಸ್ಯರನ್ನಾಗಿಸಿ ಯಾವುದೇ ವಿಚರಣೆ ಅಥವಾ ಮಾಹಿತಿ ನೀಡದೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದ್ದು, ಉಚ್ಛ ನ್ಯಾಯಾಲಯ ಯಥಾ ಸ್ತಿತಿಯನ್ನು ಕಾಪಾಡುವಂತೆ ಆದೇಶಿಸಿದೆ. ಅದರಂತೆ ನಾವು ಆಡಳಿತ ಮುಂದುವರಿಸಿಕೊಂಡು ಬಂದಿದ್ದೇವೆ. ಇದರಿಂದ ನೊಂದ ಆ ಗುಂಪು ಮಸೀದಿಯಲ್ಲಿ ಗೊಂದಲ ಸೃಷ್ಟಿಸಿ ದಾಂಧಲೆಯನ್ನೂ ಸೃಷ್ಟಿಸಿತ್ತು. ಕಮಿಟಿಯ ಜತೆ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಬಳಿಕ ಅಬ್ದುಲ್ ಹಮೀದ್‌ರವರು ಉಚ್ಛ ನ್ಯಾಯಾಲಯದಲ್ಲಿ ಅಧಿಕಾರ ಹಸ್ತಾಂರಿಸಲು ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕೆಂದು ಮನವಿ ಸಲ್ಲಿಸಿದ್ದರೂ ನ್ಯಾಯಾಲಯ ತಿರಸ್ಕರಿಸಿತ್ತು. ಇದಾದ ಮೇಲೆ ಕಮಿಟಿಯ ಮೇಲೆ ನ್ಯಾಯಾಲಯ ಉಲ್ಲಂಘನೆ ಆರೋಪವನ್ನು ಹೊರಿಸಿ ಸಲ್ಲಿಸಲಾದ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿ ತಿರಸ್ಕರಿಸಿತ್ತು. ಮಂಗಳೂರು ನ್ಯಾಯಾಲಯದದಲ್ಲಿಯೂ ನಮ್ಮ ವಿರುದ್ಧ ಮೊಕದ್ದಮೆ ಹೂಡಿದರೂ ಅದರಿಂದ ಏನೂ ಪ್ರಯೋಜನವಾಗದೆ ಈ ಗುಂಪು ಡಿವಿಜನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿ ಲೆಕ್ಕ ಪತ್ರ ಹಸ್ತಾಂತರಿಸುವಂತೆ ಕೋರಿತ್ತು. ನ್ಯಾಯಾಲಯ ಜೂ. 7ರಂದು ಲೆಕ್ಕ ಪತ್ರ ನೀಡುವಂತೆ ಆದೇಶ ಹೊರಡಿಸಿದ್ದು, ಈ ಆದೇಶಕ್ಕೆ ತಡೆಕೋರಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾದ ಮನವಿಯನ್ನು ಮಾನ್ಯ ಮಾಡಿ ಜೂ. 15ರಂದು ನ್ಯಾಯಾಲಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಸೂರಿಂಜೆ ಜಮಾಅತ್ ಸದಸ್ಯರು ಯಾವುದೇ ಉಹಾಪೋಹಗಳಿಗೆ ಕಿವಿಗೊಡದೆ ಮಸೀದಿಯ ಅಭಿವೃದ್ಧಿಗೋಸ್ಕರ ಶಾಂತಿ ಕಾಪಾಡಲು ಕಮಿಟಿ ಜತೆ ಸಹಕರಿಸಬೇಕು ಎಂದು ಲಿಯಾಕತ್ ಅಲಿ ಹೇಳಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಉಸ್ಮಾನ್ ಅಬ್ದುಲ್ಲ, ಉಪಾಧ್ಯಕ್ಷ ಎಸ್. ಅಬ್ದುಲ್ ಖಾದರ್, ಸದಸ್ಯರಾದ ಮೊಯ್ದಿನ್ ಎಂ.ಎಂ., ಮುಹಮ್ಮದ್ ಹನೀಫ್ ಪಂಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News