ಪಕ್ಷದಲ್ಲಿ ಸ್ಥಾನಮಾನ ಸಿಗುವ ವಿಶ್ವಾಸವಿದೆ: ಸೊರಕೆ
ಕಾಪು, ಜೂ.23: ಪಕ್ಷದ ನಾಯಕಿ ಸೋನಿಯಾ ಗಾಂಧಿ ನನ್ನನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಯಾವುದೇ ಬೇಸರ ಪಡಬೇಡಿ ಮುಂದಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಗುರುವಾರ ಕಾಪುವಿನ ರಾಜೀವ್ ಭವನದ ಎದುರು ಸೊರಕೆ ಬೆಂಬಲಿಗರು ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೂರವಾಣಿ ಮಾತುಕತೆ ಬಳಿಕ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ನನಗೆ ಪಕ್ಷದಲ್ಲಿ ಸ್ಥಾನ ಮಾನ ನೀಡಬೇಕು ಎಂದು ಕೇಳಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಅವಕಾಶ ಸಿಗುವ ಬಗ್ಗೆ ವಿಶ್ವಾಸ ಇದೆ ಎಂದರು.
ಇವತ್ತು ಅಧಿಕಾರ ಶಾಶ್ವತ ಅಲ್ಲ. ಗಾಳಿ, ನೀರು ಇಲ್ಲದಿದ್ದರೆ ಸಾಯಬಹುದು. ಅಧಿಕಾರ ಇಲ್ಲದಿದ್ದರೆ ಸಾಯುವುದಿಲ್ಲ. ಆದದೆಲ್ಲವೂ ಒಳ್ಳೆಯದಕ್ಕೆ ಎಂದು ತಿಳಿಯುತ್ತೇನೆ. ಮುಂದಿನ ದಿನಗಳಲ್ಲಿ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಸಚಿವನಾಗಿದ್ದಾಗ ಈ ಕ್ಷೇತ್ರದಲ್ಲಿ ಜನರೊಂದಿಗೆ ಇರಲು ಆಗಲಿಲ್ಲ. ಇನ್ನು ನನ್ನ ಕಾರ್ಯಕ್ಷೇತ್ರವನ್ನು ಕ್ಷೇತ್ರದಾದ್ಯಂತ ವಿಸ್ತರಿಸಲು ಸಹಕಾರಿಯಾಗುತ್ತದೆ ಎಂದು ನುಡಿದರು.
ನಾನು ಕಾಪುವಿಗೆ ಸೀಮಿತವಾಗಿ ಕೆಲಸ ಮಾಡಿದ್ದೇನೆ ಎಂಬ ಆರೋಪ ಇತ್ತು. ಆದರೆ ಜಿಲ್ಲೆಯಾದ್ಯಂತ ಸಂಚರಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನಂದಾದಷ್ಟು ಯಾವುದೇ ತೊಡಕು ಉಂಟಾಗದಂತೆ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಆದರೂ ನನ್ನ ವಿರುದ್ಧ ಕೆಲವರು ಪಿತೂರಿ ಹೂಡಿದ್ದರು. ನಾನು ಯಾವತ್ತೂ ಶತ್ರುಗಳಿಗೆ ಅನ್ಯಾಯ ಮಾಡಲಿಲ್ಲ ಎಂದರು.
ಸಮುದಾಯಕ್ಕೆ ನೋವಾಗಿರಬಹುದು
ನಾನು ಬಿಲ್ಲವ ಸಮುದಾಯದಿಂದ ಬಂದವನು. ದೇವರಾಜ ಅರಸು ಕಾಲದಿಂದಲೇ ಬಿಲ್ಲವರಿಗೆ ಪ್ರಾತಿನಿಧ್ಯ ಇತ್ತು. ಕರಾವಳಿಯಲ್ಲಿ ಜನಸಂಖ್ಯೆಯೂ ಇದೆ. ಇದರಿಂದ ಅವರ ಭಾವನೆಗಳಿಗೆ ನೋವಾಗಿರಬಹುದು. ಈಗ ಕೆಲವರಿಗೆ ನೀಡುವ ಸಚಿವ ಸ್ಥಾನವನ್ನು ಯಾವ ರೀತಿ ತುಲನೆ ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ ಎಂದರು.
ಕೆಲವರು ನನ್ನನ್ನು ಸಂಪರ್ಕ ಮಾಡಿ ತಾವು ಸಿಗಬೇಕು ಮಾತಾಡಬೇಕು ಅಂದಿದ್ದಾರೆ. ಆದರೆ ನಾನು ಬೆಂಗಳೂರಿಗೆ ಬಂದಾಗ ತಿಳಿಸುತ್ತೇನೆ ಎಂದಿದ್ದೇನೆ. ಕಾಂಗ್ರೆಸಿನ ಸೇನಾನಿಯಾಗಿ ಕೆಲಸ ಮಾಡುವುದೇ ನನ್ನ ಗುರಿ. ಯಾವುದೇ ಕಾರಣಕ್ಕೂ ಅತೃಪ್ತರೊಂದಿಗೆ ಸೇರುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರನಾಗಿ ಪಕ್ಷದ ತೀರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದರು.
ಕಾರಣ ತಿಳಿದಿಲ್ಲ:
ಮೂರು ವರ್ಷಗಳ ಕಾಲ ನನಗೆ ನೀಡಿದ ಇಲಾಖೆಯ ಕೆಲಸಗಳನ್ನು ಸಮರ್ಥವಾಗಿ ನಿಬಾಯಿಸಿದ್ದೇನೆ. ಆದರೂ ನನ್ನ ಗಮನಕ್ಕೆ ತಾರದೆ ನನ್ನ ನಿರ್ಧಾರವನ್ನು ಕೇಳದೆ ಸಂಪುಟದಿಂದ ಕೈಬಿಟಿಡಲಾಗಿದೆ. ಸ್ವಲ್ಪ ಮಟ್ಟಿಗೆ ಬೇಸರ ತಂದಿದೆ. ಹೈಕಮಾಂಡ್‌ನೊಂದಿಗೆ ಈ ಬಗ್ಗೆ ಕಾರಣ ಕೇಳಿದ್ದೆ. ಆದರೆ ಇದುವರೆಗೂ ಅದಕ್ಕೆ ಉತ್ತರ ಸಿಗಲಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ಬೆಳವಣಿಗೆ ಕಾಂಗ್ರೆಸ್‌ನಿಂದ ಆಗಿದೆ. ವಿದ್ಯಾರ್ಥಿ ಕಾಂಗ್ರೆಸ್, ಯುವಕ ಕಾಂಗ್ರೆಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಕಾರ್ಯದರ್ಶಿಯಾಗಿ, ಶಾಸಕನಾಗಿ, ಲೋಕಸಬಾ ಸದಸ್ಯನಾಗಿ, ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ನನ್ನ ಪಾಲಿಗೆ ಸಿಕ್ಕಿತ್ತು. ಈ ಅವಕಾಶವನ್ನು ನನಗೆ ಕಾಂಗ್ರೆಸ್ ಕಲ್ಪಿಸಿದೆ ಎಂದರು.