’ನಿರ್ಮಲ ಬಂಟ್ವಾಳ’ ಸಮೀಕ್ಷಾ ಕಾರ್ಯಕ್ಕೆ ಚಾಲನೆ
ಬಂಟ್ವಾಳ, ಜೂ. 23: ಸ್ವಚ್ಛ ಭಾರತ ಆಂದೋಲನದ ಅಂಗವಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್‌ನಡಿ ಹಮ್ಮಿಕೊಂಡಿರುವ ನಿರ್ಮಲ ಬಂಟ್ವಾಳ ಯೋಜನೆಯ ಸಮೀಕ್ಷಾ ಕಾರ್ಯಕ್ಕೆ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಸಮೀಕ್ಷಾ ನಮೂನೆಯನ್ನು ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಮಾತನಾಡಿ, ಸ್ವಚ್ಛವಾದ ಮನಸ್ಸು ಹಾಗೂ ಸ್ವಚ್ಛ ಪರಿಸರ ಉತ್ತಮ ಆರೋಗ್ಯದ ಅಡಿಪಾಯವಾಗಿದ್ದು, ಬಂಟ್ವಾಳ ಪುರಸಭೆಯ 12ನೆ ಗೂಡಿನಬಳಿ ವಾರ್ಡ್‌ನಲ್ಲಿ ಈಗಾಗಲೇ ಆರಂಭವಾಗಿರುವ ಸ್ವಚ್ಛತಾ ಆಂದೋಲನಕ್ಕೆ ಪೂರಕವಾಗಿ ಮನೆ ಮನೆ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಇದು ಯಶಸ್ವಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳಿಗೆ ನಿರ್ಮಲ ಬಂಟ್ವಾಳ ಯೋಜನೆಯ ಮಾಹಿತಿ ನೀಡಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಪ್ರತಿ ವಿದ್ಯಾರ್ಥಿಯು ತಮ್ಮ ಮನೆಯಲ್ಲಿ ಕಸವನ್ನು ಸೂಕ್ತ ರೀತಿಯಲ್ಲಿ ವಿಂಗಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದೆ ಬರೆಬೇಕೆಂದು ಕರೆ ನೀಡಿದರು.
ಸ್ಥಳೀಯ ಪುರಸಬಾ ಸದಸ್ಯ ಮುಹಮ್ಮದ್ ಇಕ್ಬಾಲ್ ಮಾತನಾಡಿ, ಬಯಲು ಶೌಚ ಮುಕ್ತ ವಾರ್ಡನ್ನು ಘೋಷಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸಮೀಕ್ಷಾ ಕಾರ್ಯಕ್ಕೆ ಕಾಲೇಜು ವಿದ್ಯಾರ್ಥಿಗಳು ಸಹಕರಿಸಲು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಬಿ. ಹಾಗೂ ಪುರಸಭಾ ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುರಸಭಾ ಆರೋಗ್ಯಾಧಿಕಾರಿ ರತ್ನಪ್ರಸಾದ್, ಸಮುದಾಯ ಸಂಘಟಕಿ ಉಮಾವತಿ ಭಾಗವಹಿಸಿದ್ದರು.
ಉಪನ್ಯಾಸಕ ದಾಮೋದರ್ ಸ್ವಾಗತಿಸಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ ಕೆ. ವಂದಿಸಿದರು. ಅಬ್ದುರ್ರಝಾಕ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪುರಸಭೆಯ ಜಂಟಿ ಆಶ್ರಯದಲ್ಲಿ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.