×
Ad

ಮಾಸ್ತಿಕಟ್ಟೆ: ಆಟೊ ಚಾಲಕರಿಂದ ಇಫ್ತಾರ್, ರಮಝಾನ್ ಕಿಟ್ ವಿತರಣೆ

Update: 2016-06-23 18:34 IST

ಉಳ್ಳಾಲ, ಜೂ.23: ಶ್ರಮ ಜೀವನಕ್ಕೆ ದೇವನ ದಯೆ ಎಂದಿಗೂ ಇರುತ್ತದೆ. ಕುರ್‌ಆನ್‌ನಲ್ಲಿ ಹೇಳಿದಂತೆ ದೇವನು ಪ್ರತಿಯೊಂದು ಜೀವಿಗೂ ಆಹಾರ ಇಟ್ಟಿರುತ್ತಾನೆ. ಅದೇ ರೀತಿ ಶ್ರಮ ವಹಿಸುವವರಿಗೂ ಅನ್ನಾಹಾರದ ಕೊರತೆ ಕಾಡದು. ಇಫ್ತಾರ್ ಮತ್ತು ಕಿಟ್ ವಿತರಣೆಯಂತಹ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆದು ಇತರರಿಗೂ ಮಾದರಿಯಾಗಬೇಕು ಎಂದು ಉಳ್ಳಾಲದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಹೇಳಿದರು.

ಉಳ್ಳಾಲದ ಮಾಸ್ತಿಕಟ್ಟೆ ಆಟೊರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಬುಧವಾರ ಮಾಸ್ತಿಕಟ್ಟೆಯಲ್ಲಿ ನಡೆದ ಇಫ್ತಾರ್ ಕೂಟ, ಆಟೊ ಚಾಲಕರಿಗೆ ರಮಝಾನ್ ಕಿಟ್ ವಿತರಣೆ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಮ್ಮ ದುಡಿಮೆಯಲ್ಲಿ ಜೀವನ ಸಾಗಿಸಲು ಪರದಾಡುವ ಆಟೊ ಚಾಲಕರು ಇಫ್ತಾರ್ ಹಾಗೂ ರಮಝಾನ್ ಕಿಟ್ ವಿತರಿಸುವ ಮೂಲಕ ತೋರಿಸಿರುವ ಹೃದಯ ಶ್ರೀಮಂತಿಕೆ ಇತರ ಸಂಘ-ಸಂಸ್ಥೆಗಳಿಗೂ ಮಾದರಿ ಎಂದು ಹೇಳಿದರು.

ಸರಕಾರದಿಂದ ಕಾರ್ಮಿಕರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಉಳ್ಳಾಲ ಭಾಗದಲ್ಲಿ ಇದರ ಸದುಪಯೋಗ ಪಡೆದವರು ವಿರಳ. ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ಆಟೊಚಾಲಕರು ಪ್ರಯೋಜನ ಪಡೆಯಬೇಕು. ಅಗತ್ಯವಿದ್ದಲ್ಲಿ ಯಾವುದೇ ಮಾಹಿತಿ ನೀಡಲು ತಾವು ಸಿದ್ಧ ಎಂದು ತಿಳಿಸಿದರು.

ಮೊದಲು ಮನೆಮಂದಿಯ ಕಷ್ಟಸುಖಗಳಿಗೆ ಸ್ಪಂದಿಸಿ ಬಳಿಕ ಸಮಾಜದ ಒಳಿತಿಗಾಗಿ ಶ್ರಮಿಸುವುದು ಅಗತ್ಯ. ಇಫ್ತಾರ್ ಮತ್ತು ಕಿಟ್ ವಿತರಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿರುವ ಆಟೊ ಚಾಲಕರು ಮನೆಯ ಕಷ್ಟ ಮರೆಯಬಾರದು ಎಂದು ಜೆಡಿಎಸ್ ಮುಖಂಡ ಜೆ.ಮುಹಮ್ಮದ್ ಕಿವಿಮಾತು ಹೇಳಿದರು.

ಮಾಸ್ತಿಕಟ್ಟೆ ಆಟೊರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ನಝೀರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅಂತೋನಿ ಡಿಸೋಜ, ಇಸ್ಮಾಯೀಲ್ ಇನ್ನಿತರರು ಉಪಸ್ಥಿತರಿದ್ದರು. ಸದಸ್ಯ ಕಬೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News