ಯೋಗ ಬೆಲೆಏರಿಕೆ ನೋವಿಗೆ ಪರಿಹಾರ ನೀಡುವುದೇ? : ಪ್ರಧಾನಿ ವಿರುದ್ಧ ಶಿವಸೇನೆಯ ಇನ್ನೊಂದು ಟೀಕಾಸ್ತ್ರ

Update: 2016-06-23 14:15 GMT

ಮುಂಬೈ,ಜೂ.23: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಗುರುವಾರ ಇನ್ನೊಂದು ಟೀಕಾಸ್ತ್ರವನ್ನು ಪ್ರಯೋಗಿಸಿರುವ ಶಿವಸೇನೆಯು, ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿರುವುದು ಪ್ರಶಂಸನೀಯ ಪ್ರಯತ್ನವಾಗಿದೆಯಾದರೂ ಯೋಗಾಭ್ಯಾಸ ಮಾಡುವುದರಿಂದ ಜನರನ್ನು ಕಾಡುತ್ತಿರುವ ‘ಬೆಲೆಏರಿಕೆಯ ನೋವು’ ಶಮನಗೊಳ್ಳುವುದೇ ಎಂದು ಪ್ರಶ್ನಿಸಿದೆ.

130 ದೇಶಗಳು ಯೋಗಾಭ್ಯಾಸದಲ್ಲಿ ತೊಡಗುವಂತೆ ಮಾಡಿದ್ದಕ್ಕಾಗಿ ಪ್ರಧಾನಿಯವರು ಪ್ರಶಂಸೆಗೆ ಅರ್ಹರಾಗಿದ್ದಾರೆ. ಬಗ್ಗಿಸುವವರಿದ್ದರೆ ಜಗತ್ತು ಬಗ್ಗುತ್ತದೆ. ಯೋಗದ ಮೂಲಕ ಮೋದಿಯವರು 130 ದೇಶಗಳನ್ನು ನೆಲದಲ್ಲಿ ಮಲಗಿಸಿದ್ದಾರೆ ಎಂದು ತನ್ನ ಮುಖವಾಣಿ ‘ಸಾಮನಾ’ದ ಸಂಪಾದಕೀಯದಲ್ಲಿ ಹೇಳಿರುವ ಶಿವಸೇನೆಯು, ಪಾಕಿಸ್ತಾನವನ್ನು ಶಾಶ್ವತವಾಗಿ ಮಲಗಿಸುವುದು ಈಗಿನ ಅಗತ್ಯವಾಗಿದೆ ಮತ್ತು ಇದು ಶಸ್ತ್ರಾಸ್ತ್ರಗಳ ನೆರವಿನಿಂದ ಮಾತ್ರ ಸಾಧ್ಯ. ಪಾಕಿಸ್ತಾನವು ಶಾಶ್ವತವಾದ ಶವಾಸನಕ್ಕೆ ಅರ್ಹವಾಗಿದೆ ಎಂದಿದೆ.

ಬಿಜೆಪಿಯೇತರ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರನ್ನು ವಿರೋಧಿಸಬಹುದು, ಆದರೆ ಯೋಗವು ಯಾರೂ ವಿರೋಧಿಸಬಾರದ ವಿಜ್ಞಾನವಾಗಿದೆ ಎಂದು ಅದು ಹೇಳಿದೆ.

 ಯೋಗದಿಂದ ಬಹಳಷ್ಟನ್ನು ಸಾಧಿಸಬಹುದು. ಆದರೆ ದೈನಂದಿನ ಜೀವನದಲ್ಲಿ ಅಧಿಕ ಹಣದುಬ್ಬರ ಮತ್ತು ಭ್ರಷ್ಟಾಚಾರದ ನೋವಿನಿಂದ ಮುಕ್ತಿ ನೀಡುವಲ್ಲಿ ಯೋಗವು ನೆರವಾಗಬಲ್ಲುದೇ? ಈ ವಿಷಯದಲ್ಲಿಯೂ ಸ್ಪಷ್ಟನೆ ನೀಡಿದರೆ ಒಳ್ಳೆಯದು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News