ಉದ್ಯೋಗ ಸೃಷ್ಟಿಗೆ ನೆರವಾಗಲು ಜವಳಿ ಕ್ಷೇತ್ರಕ್ಕೆ ಉತ್ತೇಜಕ ಕ್ರಮಗಳ ಘೋಷಣೆ:ಸಚಿವೆ ನಿರ್ಮಲಾ

Update: 2016-06-23 14:22 GMT

ಹೊಸದಿಲ್ಲಿ,ಜೂ.23: ಜವಳಿ ಕ್ಷೇತ್ರಕ್ಕೆ ಪ್ರಕಟಿಸಿರುವ ಉತ್ತೇಜಕ ಕ್ರಮಗಳು ಹೆಚ್ಚು ಉದ್ಯೋಗ ಸೃಷ್ಟಿಗೆ ನೆರವಾಗುವ ಜೊತೆಗೆ ರಫ್ತನ್ನು ಹೆಚ್ಚಿಸಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಜವಳಿ ಕ್ಷೇತ್ರದಿಂದ ಭಾರತವು ಬಹಳಷ್ಟು ಲಾಭಗಳನ್ನು ಪಡೆದುಕೊಂಡಿದೆ. ಅದು ಉದ್ಯೋಗ ಸೃಷ್ಟಿಯ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದರು. ವಿವಿಧ ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚುವರಿ ಉತ್ತೇಜಕ ಕ್ರಮಗಳನ್ನು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.

ಮೂರು ವರ್ಷಗಳಲ್ಲಿ ಒಂದು ಕೋಟಿ ಹೊಸ ಉದ್ಯೋಗಗನ್ನು ಸೃಷ್ಟಿಸುವ ಮತ್ತು 11 ಶತಕೋಟಿ ಡಾ.ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದೊಂದಿಗೆ ಜವಳಿ ಮತ್ತು ಸಿದ್ಧ ಉಡುಪುಗಳ ಕ್ಷೇತ್ರಕ್ಕೆ 6000 ಕೋ.ರೂ.ಗಳ ಪ್ಯಾಕೇಜಿಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಜವಳಿ ರಫ್ತು ಪ್ರಮಾಣವನ್ನು 30 ಶತಕೋಟಿ ಡಾ.ಗೆ ಹೆಚ್ಚಿಸುವುದೂ ಸರಕಾರದ ಗುರಿಯಾಗಿದೆ. 2014-15ರಲ್ಲಿ 17 ಶತಕೋಟಿ ಡಾ.ವೌಲ್ಯದ ರಫ್ತಿನೊಂದಿಗೆ ದೇಶದ ಒಟ್ಟೂ ರಫ್ತಿನಲ್ಲಿ ಜವಳಿ ಕ್ಷೇತ್ರವು ಗಣನೀಯ ಪಾಲನ್ನು ಹೊಂದಿದೆ. ಶ್ರೀಮಂತ ರಾಷ್ಟ್ರಗಳಿಗೆ ಕಡಿಮೆ ಬೆಲೆಗಳಲ್ಲಿ ರಫ್ತು ಮಾಡುತ್ತಿರುವ ಬಾಂಗ್ಲಾದೇಶ ಮತ್ತು ವಿಯೆಟ್ನಾಂಗಳಂತಹ ಪುಟ್ಟರಾಷ್ಟ್ರಗಳಿಂದ ಜವಳಿ ಕ್ಷೇತ್ರವು ತೀವ್ರ ಪೈಪೋಟಿಯನ್ನೆದುರಿಸುತ್ತಿದೆ.

ಭಾರತದ ಮೇಲೆ ಬ್ರೆಕ್ಸಿಟ್ ಪರಿಣಾಮದ ಕುರಿತ ಪ್ರಶ್ನೆಗೆ ಸೀತಾರಾಮನ್,ಸರಕಾರವು ಪರಿಸ್ಥಿತಿಯ ಮೇಲೆ ನಿಗಾಯಿರಿಸಿದೆ ಎಂದು ಉತ್ತರಿಸಿದರು.

ಸ್ಥಗಿತಗೊಂಡಿರುವ ಭಾರತ-ಐರೋಪ್ಯ ಒಕ್ಕೂಟ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ಪ್ರಸ್ತಾಪಿಸಿದ ಅವರು,ಭಾರತವು ಮಾತುಕತೆಗಳ ಪುನರಾರಂಭಕ್ಕೆ ದಿನಾಂಕಕ್ಕಾಗಿ ಕಾಯುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News