×
Ad

‘ವಿಚ್ಛೇದನ’ ಪಡೆಯುವಂತೆ ಮಿತ್ರಪಕ್ಷ ಶಿವಸೇನೆಗೆ ಬಿಜೆಪಿ ಸವಾಲು

Update: 2016-06-23 19:57 IST

ಮುಂಬೈ,ಜೂ.23: ತನ್ನಿಂದ ‘ವಿಚ್ಛೇದನ’ ವನ್ನು ಪಡೆದುಕೊಂಡು ಸಂಬಂಧಗಳನ್ನು ಕಡಿದುಕೊಳ್ಳುವಂತೆ ಬಿಜೆಪಿಯು ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದಲ್ಲಿ ತನ್ನ ಪಾಲುದಾರನಾಗಿರುವ ಶಿವಸೇನೆಗೆ ಸವಾಲು ಒಡ್ಡಿದ್ದು, ಇದು ಉಭಯ ಪಕ್ಷಗಳ ನಡುವಿನ ವಾಗ್ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿದೆ.

  ಮಹಾರಾಷ್ಟ್ರ ಬಿಜೆಪಿ ಘಟಕದ ಮುಖವಾಣಿಯಾಗಿರುವ ‘ಮನೋಗತ’ ಪಾಕ್ಷಿಕದ ಲ್ಲಿ ಬುಧವಾರ ಪ್ರಕಟಗೊಂಡ ‘‘ಮಿಸ್ಟರ್ ರಾವುತ್,ನೀವು ಯಾವಾಗ ತಲಾಖ್ ತೆಗೆದುಕೊಳ್ಳುತ್ತೀರಿ’ ಎಂಬ ಶೀರ್ಷಿಕೆಯ ಲೇಖನದಲ್ಲಿ ತನ್ನ ಇತ್ತೀಚಿನ ‘ನಿಜಾಮ’ ಹೇಳಿಕೆಗಾಗಿ ಶಿವಸೇನೆಯ ಸಂಸದ ಸಂಜಯ ರಾವುತ್ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಬಿಜೆಪಿ ವಕ್ತಾರ ಮಾಧವ ಭಂಡಾರಿ ಅವರು, ಮೈತ್ರಿಕೂಟದಿಂದ ಹೊರನಡೆಯುವಂತೆ ಶಿವಸೇನೆಗೆ ಸವಾಲೊಡ್ಡಿದ್ದಾರೆ.

ಶಿವಸೇನೆಯೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ಬಿಜೆಪಿಯು ಈ ಹಿಂದೆ ಮಾಡಿರುವ ‘ತ್ಯಾಗಗಳನ್ನೂ’ ಲೇಖನವು ಪಟ್ಟಿ ಮಾಡಿದೆ.

ಅವರು(ಶಿವಸೇನೆ) ಒಂದೆಡೆ ಅದೇ ‘ನಿಜಾಮ’ನ ಕೃಪೆಯಿಂದ ‘ಬಿರ್ಯಾನಿ’ಯನ್ನು ತಿನ್ನುತ್ತಿದ್ದಾರೆ ಮತ್ತು ಇನ್ನೊಂದೆಡೆ ನಮ್ಮನ್ನು ಟೀಕಿಸುತ್ತಿದ್ದಾರೆ. ಅದೇ ‘ನಿಜಾಮ’ನ ಕೃಪೆಯಿಂದಲೇ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವ ಖಾತೆಗಳನ್ನು ಹೊಂದಿದ್ದಾರೆ ಮತ್ತು ಅಧಿಕಾರದ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಬಿಜೆಪಿಗೆ ಶಾಪ ಹಾಕುತ್ತಿದ್ದಾರೆ. ಇದಕ್ಕೆ ಕೃತಘ್ನತೆ ಎನ್ನುತ್ತಾರೆ ಎಂದು ಕುಟುಕಿರುವ ಲೇಖನವು,‘ನಿಜಾಮ’ ನಿಂದ ನಿಮ್ಮ ಶೋಷಣೆಯಾಗುತ್ತಿದೆ ಎಂದು ನೀವು ಭಾವಿಸುತ್ತೀರಾದರೆ ನೀವು ಹೊರಗೇಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದೆ. ಇದೇ ವೇಳೆ,ಅವರಿಗೆ ಆ ಧೈರ್ಯವಿಲ್ಲ ಎಂದು ಅದು ಕಿಚಾಯಿಸಿದೆ.

ಕೇಂದ್ರ ಮತ್ತು ಮಹಾರಾಷ್ಟ್ರಗಳಲ್ಲಿನ ಬಿಜೆಪಿ ನೇತೃತ್ವದ ಸರಕಾರಗಳು ನಿಜಾಮನ ಸರಕಾರಕ್ಕಿಂತಲೂ ಕೆಟ್ಟದಾಗಿವೆ ಎಂದು ರಾವುತ್ ಇತ್ತೀಚಿಗೆ ಟೀಕಿಸಿದ್ದರು.

ತಮ್ಮ ಬಲ ಕುಂದುತ್ತಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ರಾವುತ್ ಮತ್ತು ಶಿವಸೇನೆಯ ಅಧ್ಯಕ್ಷರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಮತ್ತು ಇದರಿಂದಾಗಿ ಅವರು ಹತಾಶರಾಗಿದ್ದಾರೆ. ಅವರು ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು ಮತ್ತು ನಮ್ಮನ್ನು ದೂರುವುದನ್ನು ನಿಲ್ಲಿಸಬೇಕು ಎಂದು ಭಂಡಾರಿ ಲೇಖನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News