ಬೆಳ್ತಂಗಡಿ: ಅಕ್ರಮ ಕಟ್ಟಡ ತೆರವುಗೊಳಿಸಲು ಡಿಸಿ ಸೂಚನೆ
ಬೆಳ್ತಂಗಡಿ, ಜೂ.23: ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಎಂಬಲ್ಲಿ ರಸ್ತೆ ಮಾರ್ಜಿನ್‌ನಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು 10 ದಿನದಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಹಶೀಲ್ದಾರ್‌ರಿಗೆ ಆದೇಶಿಸಿದ್ದಾರೆ.
ಗುರುವಾರ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಅವರಿಗೆ, ಸಾಮಾಜಿಕ ಕಾರ್ಯಕರ್ತ ಶೇಖರ್ ಲಾಲ ಮನವಿ ನೀಡಿ, ಕಿಲ್ಲೂರಿನಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ಇನ್ನೂ ತೆರವುಗೊಳಿಸಿಲ್ಲ. ಕಟ್ಟಡ ಕಟ್ಟಿದವರ ಮೇಲೆ ಕೇಸು ದಾಖಲಿಸಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ ಎಂದು ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ತಹಶೀಲ್ದಾರ್ ಎಚ್.ವಿ.ಪ್ರಸನ್ನಮೂರ್ತಿ ಅವರಲ್ಲಿ ಮಾಹಿತಿ ಕೇಳಿದಾಗ, 15 ದಿನದಲ್ಲಿ ತೆವುಗೊಳಿಸುವುದಾಗಿ ಕಟ್ಟಡ ಕಟ್ಟಿದವರು ತಿಳಿಸಿದ್ದಾರೆ ಎಂದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿ, 10 ದಿನದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೇ ತೆರವುಗೊಳಿಸುವಂತೆ ತಹಶೀಲ್ದಾರ್ ರಿಗೆ ಸೂಚಿಸಿದರು. ಸುಲ್ಕೇರಿ ಗ್ರಾಮದಲ್ಲಿ 178 ಎಕ್ರೆ ಜಾಗ ಕೊರಗ ಹಾಗೂ ಮಲೆಕುಡಿಯ ಸಮುದಾಯದವರಿಗೆ ಮೀಸಲಾಗಿಟ್ಟಿದ್ದರೂ, ಆ ಜಾಗ ಕಾಡು ಪ್ರದೇಶದಲ್ಲಿದ್ದು, ಮೀಸಲು ಇರಿಸಿದ ಜಾಗವನ್ನು ಬದಲಾಯಿಸಿ ಬೇರೆ ಜಾಗವನ್ನು ಇರಿಸುವಂತೆ ದಲಿತ ಸಂಘದ ಸಂಜೀವ ಆರ್. ಮನವಿ ಮಾಡಿದರು. ಈಗ ಇರಿಸಿದ ಜಾಗ ಸರಕಾರಿ ಜಾಗವಾಗಿದೆ. ಅಲ್ಲಿ ಕೊರಗ ಜನಾಂಗ ಹಾಗೂ ರಾಷ್ಟೀಯ ಉದ್ಯಾನದಿಂದ ಹೊರಬರುವವರಿಗೆ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಆದರೆ ಪದ್ಮ ವಸಂತ್ ಎಂಬವರು ನವಿ ನೀಡಿ ಒಂದು ವರ್ಷದ ಹಿಂದೆ 1.70 ಎಕ್ರೆ ಜಾಗದ ಸರ್ವೇ, ನಕ್ಷೆ ಆಗಿದೆ. ಇನ್ನೂ ಜಾಗ ಮಂಜೂರು ಮಾಡಿಲ್ಲ ಎಂದು ಮನವಿ ಮಾಡಿದರು. ಅದೇ ರೀತಿ, ಉಕ್ರು, ಚಂಪಾ, ಲಕ್ಷ್ಮೀ ಆನಂದ್ ಎಂಬವರೂ ಜಾಗ ಮಂಜೂರು ಮಾಡುವಂತೆ ಮನವಿ ಮಾಡಿದರು. ತಕ್ಷಣ ಈ ಬಗ್ಗೆ ಪ್ರಸ್ತಾವನೆಯನ್ನು ಕಳುಹಿಸಿ ಎಲ್ಲರಿಗೂ ಜಾಗ ಮಂಜೂರು ಮಾಡುವಂತೆ ಡಿಸಿ ಸೂಚಿಸಿದರು.
ತೋಟತ್ತಾಡಿ ಗ್ರಾಮದಲ್ಲಿ ಡಿಸಿ ಮನ್ನಾ ಭೂಮಿಯಲ್ಲಿ ಮನೆ ಮಾಡಿ ಕುಳಿತಿರುವ ಬಿಂದು ಎಂಬವರು ತನಗೆ ಜಾಗವನ್ನು ಮಂಜೂರು ಮಾಡಿ ಎಂದು ಮನವಿ ನೀಡಿದರು. ಈ ಬಗ್ಗೆ ಕಂದಾಯ ನಿರೀಕ್ಷಕರು, ಆ ಜಾಗ ಡಿಸಿ ಮನ್ನಾ ಭೂಮಿಯಾಗಿರುವುದರಿಂದ ನೀಡಲು ಸಾಧ್ಯವಾಗಿಲ್ಲ. ಅಲ್ಲಿ ಉಳಿದವರೆಲ್ಲ ದಲಿತರಾಗಿದ್ದು, ಅವರ ಆಕ್ಷೇಪಣೆಯಿದೆ ಎಂದರು. ಆದರೆ ಮಾನವೀಯತೆ ಮೇಲೆ, ಆ ಜಾಗದ ಬದಲು ಡಿಸಿ ಮನ್ನಾ ಜಾಗಕ್ಕೆ ಬದಲಿ ಜಾಗವನ್ನು ಪ್ರಸ್ತಾವನೆ ಕಳುಹಿಸಿ, ಬಿಂದು ಅವರಿಗೆ ಜಾಗವನ್ನು ಮಂಜೂರು ಮಾಡಿ ಎಂದು ಡಿಸಿ ಸೂಚಿಸಿದರು.
ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಹಾಗೂ ಸೇರ್ಪಡೆ ಬಗ್ಗೆ ಅನೇಕ ಮಂದಿ ಆಹರ ಇಲಾಖೆಯಲ್ಲಿ ಸರ್ವರ್ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿ, ರಾಜ್ಯಾದ್ಯಂತ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ನಡೆದಿದ್ದು, ಇನ್ನೂ ಶೇ. 10ರಷ್ಟು ಬಾಕಿಯಾಗಿದೆ. ಆಧಾರ್ ಕಾರ್ಡ್ ಲಿಂಕ್ ಆಗದೆ ಹೊಸ ಪಡಿತರ ಚೀಟಿಗೆ ಅಥವಾ ಸೇರ್ಪಡೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.