ಜೂ.24ರಂದು ‘ಮಹೀಂದ್ರಾ ಅಡ್ವೆಂಚರ್ ಮಾನ್ಸೂನ್ ಚಾಲೆಂಜ್ 2016’ ಮೋಟಾರ್ ರ್ಯಾಲಿಗೆ ಚಾಲನೆ
ಮಂಗಳೂರು, ಜೂ. 22: ಮಹೀಂದ್ರ ಅಡ್ವೆಂಚರ್ ತಂಡವು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ (ಐಎಂಎಸ್‌ಸಿ) ಸಹಯೋಗದೊಂದಿಗೆ ನಡೆಯಲಿರುವ ಮಹೀಂದ್ರಾ ಅಡ್ವೆಂಚರ್ ಮಾನ್ಸೂನ್ ಚಾಲೆಂಜ್ 2016 ಮೋಟಾರ್ ರ್ಯಾಲಿಗೆ ನಗರದ ಫಿಝಾ ಫೋರಂ ಮಾಲ್‌ನಲ್ಲಿ ಜೂನ್ 24ರಂದು ಸಂಜೆ 6 ಗಂಟೆಗೆ ಚಾಲನೆ ದೊರಕಲಿದೆ ಎಂದು ಮಹೀಂದ್ರಾ ಅಡ್ವೆಂಚರ್‌ನ ಸೀನಿಯರ್ ಮ್ಯಾನೇಜರ್ ಕೆ.ಎಸ್.ವೆಂಕಟೇಶ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಯೆಟ್ ಟಯರ್ ಸಂಸ್ಥೆಯು ಪ್ರಸ್ತುತ ಪಡಿಸುವ ಅತಿದೊಡ್ಡ ಟಿಎಸ್‌ಡಿ (ಟೈಮ್, ಸ್ಪೀಡ್, ಡಿಸ್ಟೆನ್ಸ್) ರ್ಯಾಲಿ ಆಗಿದ್ದು, 30ಕ್ಕೂ ಅಧಿಕ ವಾಹನಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ವಾಹನಗಳು ಎರಡು ದಿನಗಳಲ್ಲಿ 650 ಕಿ.ಮೀ. ದೂರ ಸಂಚರಿಸಲಿದೆ ಎಂದರು.
ರ್ಯಾಲಿಯು ವೇಗದ ಜೊತೆಗೆ ನಿಗದಿತ ಅವಧಿಯಲ್ಲಿ ನಿಗದಿತ ಅಂತರ ಕ್ರಮಿಸುವ ಗುರಿಯನ್ನೂ ಹೊಂದಿದೆ. ಚಾಲಕ ಮತ್ತು ಮಾರ್ಗದರ್ಶಕ ಇಬ್ಬರೂ ಅಂತರ ಮತ್ತು ಸಮಯದ ಮೇಲೆ ನಿಗಾ ಇಟ್ಟಿರಬೇಕು. ಶುಕ್ರವಾರ ಚಾಲನೆ ದೊರಕುವ ರ್ಯಾಲಿಯು ಮಂಗಳೂರಿನಿಂದ ಪ್ರಾರಂಭಗೊಂಡು ಶಿವಮೊಗ್ಗಕ್ಕೆ ತೆರಳಲಿದ್ದು, ಅಲ್ಲಿಂದ ಗೋವಾಕ್ಕೆ ಜೂನ್ 26ಕ್ಕೆ ತಲುಪಲಿದೆ. ಮಾರ್ಗದುದ್ದಕ್ಕೂ ಹೆದ್ದಾರಿಗಳು, ಬಿ ರಸ್ತೆಗಳು, ಕಚ್ಚಾ ರಸ್ತೆಗಳು, ಪಶ್ಚಿಮಘಟ್ಟ ಪ್ರದೇಶಗಳು ಇರಲಿವೆ.
ಈ ಸವಾಲಿನಡಿ ಸ್ಪರ್ಧಿಗಳು ಯಾವುದೇ ವಿಭಾಗದಲ್ಲೂ ಭಾಗವಹಿಸಬಹುದು. ಚಾಲೆಂಜ್ (ಪ್ರೊಫೆಷನಲ್) ಅಮೆಚೂರ್, ಕಾರ್ಪೊರೇಟ್, ಲೇಡಿಸ್, ಕಪಲ್ ಮತ್ತು ಮೀಡಿಯಾ ವಿಭಾಗದಲ್ಲಿ ಪಾಲ್ಗೊಳ್ಳಬಹುದು. ‘ವಿದ್ ಯು ಹಮೇಶಾ’ ಸೇವಾ ತಂಡವು ರ್ಯಾಲಿಯುದ್ದಕ್ಕೂ ಸ್ಪರ್ಧಿಗಳಿಗೆ ಸೇವೆ ಒದಗಿಸಲು ಸಜ್ಜಾಗಿರುತ್ತದೆ. 4 ಲಕ್ಷ ರೂ. ಮೊತ್ತದ ಬಹುಮಾನ ಇದೆ ಎಂದು ವೆಂಕಟೇಶ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಯೆಟ್ ಟಯರ್ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜರ್ ಸುನಿಲ್, ಕರ್ನಾಟಕ ಏಜೆನ್ಸಿ ಮಂಗಳೂರಿನ ಆಡಳಿತ ಪಾಲುದಾರ ಸಂತೋಷ್ ರಾಡ್ರಿಗಸ್, ಐಎಂಎಸ್‌ಸಿ ಅಧ್ಯಕ್ಷ ಮೂಸಾ ಶರೀಫ್, ಕಾರ್ಯದರ್ಶಿ ಅಶ್ವಿನ್ ನಾಕ್ ಉಪಸ್ಥಿತರಿದ್ದರು.