×
Ad

ಜನರಲ್ ಕೆಟಗರಿಯಿಂದ ಟಾಯ್ಲೆಟ್ ಕ್ಲೀನರ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದ ಕ್ರೈಸ್ತ ಎನ್‌ಜಿಓ ಮೇಲೆ ದಾಳಿ

Update: 2016-06-23 23:50 IST

ಅಹ್ಮದಾಬಾದ್, ಜೂ.23: ಸಾಮಾನ್ಯ ವರ್ಗ (ಜನರಲ್ ಕೆಟಗರಿ) ಅಭ್ಯರ್ಥಿಗಳಿಂದ ನೈರ್ಮಲ್ಯ ಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಸಂತ ಕ್ಸೇವಿಯರ್ ಅನೌಪಚಾರಿಕ ಶಿಕ್ಷಣ ಸೊಸೈಟಿಯ ಮಾನವ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಎಂಬ ಸ್ವಯಂಸೇವಾ ಸಂಸ್ಥೆ ಇದೀಗ ದೊಡ್ಡ ವಿವಾದಕ್ಕೆ ಸಿಲುಕಿಕೊಂಡಿದೆ.
ಈ ಸಂಬಂಧ ಸಂಸ್ಥೆ ನೀಡಿರುವ ಜಾಹೀರಾತಿನಲ್ಲಿ ಸಾಮಾನ್ಯ ವರ್ಗದವರಿಗೆ ಆದ್ಯತೆ ಎಂದು ನಮೂದಿಸಲಾಗಿದೆ. ಬುಧವಾರ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತ ವಾಗಿದ್ದು, ರಜಪೂತ ಶೌರ್ಯ ಪ್ರತಿಷ್ಠಾನ (ಆರ್‌ಎಸ್‌ಎಫ್) ಹಾಗೂ ಯುವಶಕ್ತಿ ಸಂಘಟನೆ (ವೈಎಸ್‌ಎಸ್), ಜಾಹೀರಾತು ನೀಡಿದ, ಸ್ವಯಂ ಸೇವಾ ಸಂಸ್ಥೆಯ ಕಚೇರಿ ಮೇಲೆ ದಾಂಧಲೆ ನಡೆ ಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ಕಚೇ ರಿಗೆ ನುಗ್ಗಿದ ಕಾರ್ಯಕರ್ತರು ಕಿಟಕಿಗಳನ್ನು ಮುರಿದು ಹೂಕುಂಡಗಳನ್ನು ಪುಡಿ ಮಾಡಿದರು. ಇದು ಸಮಾಜವನ್ನು ಒಡೆಯುವ ತಂತ್ರ ಎಂದು ಆಕ್ಷೇ ಪಿಸಿದರು. ಈ ಬಗ್ಗೆ ಏಳು ದಿನಗಳ ಒಳಗಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಮುಸ್ಲಿಂ ಸಂಟನೆಯೊಂದು ಕಾನೂನಾತ್ಮಕ ನೋಟಿಸ್ ಜಾರಿಗೊಳಿಸಿದೆ.
ಈ ವಿವಾದಾತ್ಮಕ ಜಾಹೀರಾತಿನಲ್ಲಿ ಜನರಲ್ ಕೆಟಗರಿ ಅಭ್ಯರ್ಥಿಗಳಾದ ಬ್ರಾಹ್ಮಣರು, ಕ್ಷತ್ರಿಯ, ಬನಿಯಾ, ಪಟೇಲ್, ಜೈನ್, ಸೈಯದ್, ಪಠಾಣ್, ಸಿರಿಯನ್ ಕ್ರಿಶ್ಚಿಯನ್ ಹಾಗೂ ಪಾರ್ಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸಂಸ್ಥೆಯ ಆವರಣ ಸ್ವಚ್ಛಗೊಳಿಸುವ, ಶೌಚಾಲಯ ಮತ್ತು ಸ್ನಾನಗೃಹ ಶುಚಿಗೊಳಿಸುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಪ್ರಚೋದಕ ಜಾಹೀರಾತು ನೀಡಿರುವ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸಬೇಕು. ನಮ್ಮ ಪ್ರತಿಭಟನೆ ಗಾಂಧಿ ಮಾರ್ಗದ್ದಾಗಿರುವುದಿಲ್ಲ ಎಂದು ವೈಎಸ್‌ಎಸ್ ಅಧ್ಯಕ್ಷ ರೋಣಕ್‌ಸಿಂಗ್ ಗೊಹೆಲ್ ಹೇಳಿದ್ದಾರೆ.

ಇದು ಕ್ರೈಸ್ತ ಮಿಷನರಿಗಳ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಸೈಯದ್ ಸಮುದಾಯವನ್ನು ಕೀಳಾಗಿ ಬಿಂಬಿಸುವ ಹುನ್ನಾರ ಎಂದು ಸುನ್ನಿ ಅವಾಮಿ ಫೋರಂನ ಅಧ್ಯಕ್ಷ ಉಸ್ಮಾನ್ ಖುರೇಷಿ ಕಾನೂನು ನೋಟಿಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಎನ್‌ಜಿಓ ಪತ್ರಿಕಾಗೋಷ್ಠಿ ಕರೆದು, ಕೊನೆಕ್ಷಣದ ಗೊಂದಲದಿಂದಾಗಿ ಈ ಜಾಹೀ ರಾತು ಪ್ರಕಟವಾಗಿದೆ ಎಂದು ಸ್ಪಷ್ಟನೆ ನೀಡಿದೆ.

.........................

ಐಐಟಿ-ಕಾನ್ಪುರದ ಪ್ರೊಫೆಸರ್‌ಗೆ ಜಿ.ಡಿ ಬಿರ್ಲಾ ಪ್ರಶಸ್ತಿ
ಹೊಸದಿಲ್ಲಿ, ಜೂ.23: ಐಐಟಿ-ಕಾನ್ಪುರದ ಪ್ರೊಫೆಸರ್ ಸಂಜಯ್ ಮಿತ್ತಲ್, ವೈಜ್ಞಾನಿಕ ಸಂಶೋಧನೆಗಾಗಿ 2016ನೆ ಸಾಲಿನ ಪ್ರತಿಷ್ಠಿತ ಜಿ.ಡಿ. ಬಿರ್ಲಾ ಪ್ರಶಸ್ತಿಯನ್ನು ಪಡೆದಿದ್ದಾರೆ.
48ರ ಹರೆಯದ ಮಿತ್ತಲ್, ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಮೆಕ್ಯಾನಿಕ್ಸ್ ವಲಯದಲ್ಲಿ ನೀಡಿರುವ ಕೊಡುಗೆಗಾಗಿ ಅವರನ್ನು ಈ ಪ್ರಶಸ್ತಿಗೆ ಆರಿಸಲಾಗಿದೆಯೆಂದು ಕೆ.ಕೆ.ಬಿರ್ಲಾ ಪ್ರತಿಷ್ಠಾನವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಉನ್ನತ ಸಾಧನೆಯ ಲೆಕ್ಕಗಳಿಗಾಗಿ(ಎಚ್‌ಪಿಎಸ್) ಸಾಂತ ಮೂಲವಸ್ತು ಗಣಿತ ವಿಧಾನದ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ದ್ರವದ ಹರಿಯುವಿಕೆಗಾಗಿ ಸಾಂತ ಮೂಲವಸ್ತು ವಿಶ್ಲೇಷಣೆಯ ಬಗ್ಗೆ ಕೆಲಸ ಮಾಡಿದ ಹಾಗೂ ಅದನ್ನು ಬಳಸಿದ ಭಾರತದ ಕೆಲವೇ ವಿಜ್ಞಾನಿಗಳಲ್ಲಿ ಮಿತ್ತಲ್ ಒಬ್ಬರಾಗಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News