ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಹೊರಕ್ಕೆ ..!
ಲಂಡನ್, ಜೂ.24: ಬ್ರಿಟನ್ ಯೂರೋಪಿಯನ್ ಯೂನಿಯನ್‌ನಲ್ಲಿ ಮುಂದುವರಿಯಬೇಕೆ ಅಥವಾ ಯೂನಿಯನ್‌ನಿಂದ ಹೊರಬರಬೇಕೆ ? ಎಂಬ ಬಗ್ಗೆ ನಡೆದ ಬ್ರೆಕ್ಸಿಟ್ ಜನಮತದಲ್ಲಿ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಹೆಚ್ಚು ಒಲವು ವ್ಯಕ್ತವಾಗಿದೆ.ಜನಮತದಲ್ಲಿ ಬ್ರಿಟನ್ ಯುರೋಪಿಯನ್ ಯೂನಿಯನ್‌ನಿಂದ ಹೊರಬರುವ ನಿರ್ಧಾರವಾಗಿದೆ. ಇದೊಂದು ಐತಿಹಾಸಿಕ ವಿಚ್ಛೇದನೆಯಾಗಿದೆ ಎಂದು ಬಿಬಿಸಿ ಬಣ್ಣಿಸಿದೆ.
ಜನಮತ ಗಣನೆಯಲ್ಲಿ ಉಭಯ ನಿರ್ಣಯಕ್ಕೆ ಸಮಾನ ಪೈಪೋಟಿ ಕಂಡು ಬಂದಿದ್ದರೂ ಅಂತಿಮವಾಗಿ ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರ ಬರುವ ನಿರ್ಧಾರವಾಗಿದೆ.
ಯೂರೋಪಿಯನ್ ಯೂನಿಯನ್‌ನಿಂದ ಬ್ರಿಟನ್ ಹೊರ ಹೋದರೆ ಯೂರೋಪ್‌ನ ಯೂನಿಯನ್‌ನಲ್ಲಿರುವ ದೇಶಗಳಲ್ಲಿನ ಮಾರುಕಟ್ಟಯಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ನಾನಾ ಸಮೀಕ್ಷೆಗಳು ತಿಳಿಸಿವೆ.
ವ್ಯಾಪಾರ ಮತ್ತು ಭದ್ರತೆಯ ನಿಟ್ಟಿನಲ್ಲಿ ಯೂರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಇಟಲಿ, ಲಕ್ಸೆಂಬರ್ಗ್ ಮತ್ತು ಹಾಲೆಂಡ್ ದೇಶಗಳು 1958ರಲ್ಲಿ ಯೂರೋಪಿಯನ್ ಆರ್ಥಿಕ ಒಕ್ಕೂಟ ಎಂಬ ಸಂಘಟನೆ ಹುಟ್ಟುಹಾಕಿಕೊಂಡಿದ್ದವು. ಇದಕ್ಕೆ 22 ರಾಷ್ಟ್ರಗಳು ಸೇರ್ಪಡೆಯಾಗಿದ್ದವು. ಬ್ರಿಟನ್ 1973ರಲ್ಲಿ ಸೇರ್ಪಡೆಯಾಗಿತ್ತು. ಒಕ್ಕೂಟದಿಂದ ಬ್ರಿಟನ್ ಹೊರಹೋದರೆ ಭಾರತದ ಮಾರುಕಟ್ಟೆಯಲ್ಲೂ ಭಾರೀ ಏರಿಳಿತ ನಿರೀಕ್ಷಿಸಲಾಗಿದೆ.