‘ಇಸ್ಲಾಮಿಗೆ ನನ್ನ ದೇಶದಲ್ಲಿ ಅವಕಾಶವಿಲ್ಲ’

Update: 2016-06-24 13:10 GMT

 ವಾಷಿಂಗ್ಟನ್, ಜೂ.24: ವಲಸಿಗರ ಸಮಸ್ಯೆಯಿಂದ ಹೊರಬರುವ ಒಂದೇ ಉದ್ದೇಶದಿಂದ ಬ್ರಿಟನ್ ಬ್ರೆಕ್ಸಿಟ್ ಪರ ಮತ ಚಲಾಯಿಸಿ ಯುರೋಪಿಯನ್ ಯೂನಿಯನ್‌ನಿಂದ ಹೊರ ಬರಲು ತೀರ್ಮಾನಿಸಿದೆಯಾದರೆ, ಇನ್ನೊಂದು ಕುತೂಹಲಕರ ಅಂಶವೆಂದರೆ ಯುರೋಪಿಯನ್ ಯೂನಿಯನ್‌ನ ಕಾರ್ಯಕಾರಿ ಮಂಡಳಿಯಾದ ಯುರೋಪಿಯನ್ ಕೌನ್ಸಿಲ್‌ನ ಮುಂದಿನ ಅಧ್ಯಕ್ಷ ಹುದ್ದೆಯೇರಲಿರುವ  ಸ್ಲೊವಾಕಿಯ ದೇಶದ ಪ್ರಧಾನಿ ರಾಬರ್ಟ್ ಫಿಕೋ ‘‘ಇಸ್ಲಾಮಿಗೆ ನನ್ನ ದೇಶದಲ್ಲಿ ಅವಕಾಶವಿಲ್ಲ’’ ಎಂದು ಮೇ ತಿಂಗಳಲ್ಲೇ ಹೇಳಿದ್ದಾರೆ.

ಯುರೋಪ್ ದೇಶಗಳಲ್ಲಿ ವಲಸಿಗರ ಸಮಸ್ಯೆಯ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಕೆಲವೇ ಕೆಲವು ನಾಯಕರಲ್ಲಿ ಫಿಕೋ ಒಬ್ಬರಾಗಿದ್ದಾರೆ.
‘‘ವಲಸಿಗರು ನಮ್ಮ ದೇಶದ ಚಿತ್ರಣವನ್ನೇ ಬದಲಾಯಿಸುತ್ತಾರೆ,’’ಎಂದು ಹೇಳಿದ್ದ ಅವರು ತಮ್ಮ ದೇಶ ಹೀಗೆ ಬದಲಾಗಲು ತಾನು ಅವಕಾಶ ನೀಡುವುದಿಲ್ಲವೆಂದೂ ನುಡಿದಿದ್ದರು.

ಇಂತಹುದೇ ಹೇಳಿಕೆಯನ್ನು ಅವರು ಕಳೆದ ವರ್ಷವೂ ನೀಡಿದ್ದರು. ಸಿರಿಯಾ ದೇಶದ ನಿರಾಶ್ರಿತರು ಯುರೋಪ್ ದೇಶಗಳಿಗೆ ಬರಲಾರಂಭಿಸಿದಾಗ ಜರ್ಮನ್ ಚಾನ್ಸಲರ್ ಏಂಜಲಾ ಮರ್ಕೆಲ್ ಜನಾಭಿಪ್ರಾಯದ ವಿರುದ್ಧವಾಗಿ ಅವರನ್ನು ಸ್ವಾಗತಿಸಿದ್ದರು. ಆದರೆ ತಮ್ಮ ದೇಶ ವಲಸಿಗರಿಗೆ ಆಶ್ರಯ ಕೊಡಬೇಕೆಂಬ ಕಟ್ಟುಪಾಡಿಗೆ ಒಳಗಾಗಿಲ್ಲವೆಂದು ಫಿಕೋ ವಾದಿಸಿದ್ದರು.

‘‘ಸ್ಲೊವಾಕಿಯ ಕ್ರಿಶ್ಚಿಯನ್ ರಾಷ್ಟ್ರವಾಗಿರುವುದರಿಂದ ನಾವು ದೇಶದಲ್ಲಿ ಮಸೀದಿ ನಿರ್ಮಿಸುವ ಹಾಗೂ ನಮ್ಮ ದೇಶದ ಸಂಸ್ಕೃತಿ, ಮೌಲ್ಯಗಳಲ್ಲಿ ಬದಲಾವಣೆ ತರಲು ಯತ್ನಿಸುವ 3ರಿಂದ 4 ಲಕ್ಷ ಮುಸ್ಲಿಂ ವಲಸಿಗರನ್ನು ದೇಶದೊಳಗೆ ಬಿಡಲು ಸಾಧ್ಯವಿಲ್ಲ,’’ ಎಂದು ಫಿಕೋ ಕಳೆದ ವರ್ಷ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News