ಕರುಣೆ ತೋರುವುದು ಇಸ್ಲಾಂ ಧರ್ಮದ ಮೊದಲ ಪಾಠ: ಜುನೈದ್ ಜಿಫ್ರಿ ತಂಙಳ್
ಉಪ್ಪಿನಂಗಡಿ, ಜೂ.24: ವ್ಯಕ್ತಿಯನ್ನು ಜಾತಿ, ಧರ್ಮದ ಮೂಲಕ ಗುರುತಿಸದೆ ಆತನನ್ನು ಮನುಷ್ಯ ಎಂದು ಗೌರವಿಸುವುದು ಮತ್ತು ಬಡವರ, ವಿಧವೆಯರ, ಅಸಹಾಯಕರ ಬಗ್ಗೆ ಕರುಣೆ ತೋರುವುದು ಇಸ್ಲಾಮಿನ ಮೊದಲ ಪಾಠವಾಗಿದೆ ಎಂದು ಆತೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಹೇಳಿದ್ದಾರೆ.
ಅವರು ಪುತ್ತೂರು ತಾಲೂಕಿನ ಕೊಲದಲ್ಲಿ ಅಲ್ ಫಲಾಹ್ ಫೌಂಡೇಶನ್ ಬೆಂಗಳೂರು ಮತ್ತು ಎಂ. ಫ್ರೆಂಡ್ಸ್ ಮಂಗಳೂರು ವತಿಯಿಂದ ನಡೆದ ಎಂಡೋ ಸಂತ್ರಸ್ತರ ಜೊತೆ ಸೌಹಾರ್ದ ಇಫ್ತಾರ್ ಕೂಟ ಮತ್ತು ಎಂಡೋ ಸಂತ್ರಸ್ತರಿಗೆ ರಮಝಾನ್ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಜಿ.ಪಂ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಕೆ.ಕೆ. ಶಾಹುಲ್ ಹಮೀದ್, ಪತ್ರಕರ್ತ ಮುಹಮ್ಮದ್ ಆರಿಫ್ ಪಡುಬಿದ್ರೆ, ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ರಘು, ಅಲ್ ಫಲಾಹ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಅಶ್ರಪ್ ಕಾರ್ಲೆ ಮಾತನಾಡಿದರು.
ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮುಹಮ್ಮದ್ ಸಾಹೇಬ್, ಎಂಡೋ ಸಂತ್ರಸ್ತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗಂಗಾರತ್ನ ವಸಂತ, ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್, ಶ್ರೀರಂಗಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಮುಸ್ತಫಾ ಆತೂರು, ಸುರುಳಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಮೋಹನ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯದ್ ಅನಸ್ ತಂಙಳ್ ದುಆ ನೆರವೇರಿಸಿದರು. ಎಂ. ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್‌ಹಾಜಿ ಅಧ್ಯಕ್ಷತೆ ವಹಿಸಿದ್ದರು. ಎಂ.ಫ್ರೆಂಡ್ಸ್ ಸಂಸ್ಥೆ ಅಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಸಿದ್ದಿಕ್ ನೀರಾಜೆ, ಶಿಕ್ಷಕ ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.