ಕೋಟೆಕಾರು ಪಟ್ಟಣ ಪಂಚಾಯತ್‌ ಅಧ್ಯಕ್ಷರಾಗಿ ಉದಯ್ ಶೆಟ್ಟಿ, ಉಪಾಧ್ಯಕ್ಷರಾಗಿ ಅನಿಲ್ ಆಯ್ಕೆ

Update: 2016-06-24 13:22 GMT

ಉಳ್ಳಾಲ, ಜೂ.24: ಕೋಟೆಕಾರು ಗ್ರಾಮವು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿ ಇದೀಗ ಮೊದಲ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಗೆದ್ದು ಅಧಿಕಾರಕ್ಕೇರಿದ್ದು ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಉದ್ ಕುಮಾರ್ ಶೆಟ್ಟಿ ಸುಳ್ಳೆಂಜೀರ್ ಅಧ್ಯಕ್ಷರಾಗಿ ಹಾಗೂ ಅನಿಲ್ ಬಗಂಬಿಲ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕೋಟೆಕಾರು ಪಟ್ಟಣ ಪಂಚಾಯತ್‌ಗೆ ಕಳೆದ ಎ.24ರಂದು ಮತದಾನ ನಡೆದು ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿ ಪಕ್ಷವು 9, ಕಾಂಗ್ರೆಸ್ 4, ಸಿಪಿಐಎಂ 1, ಎಸ್‌ಡಿಪಿಐ 1, ಬಿಜೆಪಿ ಬಂಡಾಯ 2 ಸ್ಥಾನಗಳಿಸಿತ್ತು.

ಶುಕ್ರವಾರ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಆರಂಭದಲ್ಲಿ ಬೆಳಗ್ಗೆ 11 ಗಂಟೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯ ಪ್ರಕಾರ ಬಿಜೆಪಿಯಿಂದ 7 ನೆ ವಾರ್ಡ್ ಸದಸ್ಯ ಉದಯ್ ಕುಮಾರ್ ಶೆಟಿ ನಾಮಪತ್ರ ಸಲ್ಲಿಸಿದರೆ ಇವರ ನಾಮಪತ್ರವನ್ನು ಪಂಚಾಯತ್ ಸದಸ್ಯರಾದ ದಿವ್ಯಾ ಶೆಟ್ಟಿ ಸೂಚಿಸಿ, ಅಣ್ಣು ಅನುಮೋದಿಸಿದ್ದರು. ಕಾಂಗ್ರೆಸ್‌ನಿಂದ 9ನೆ ವಾರ್ಡ್ ಸದಸ್ಯ ಹಮೀದ್ ಹಸನ್ ನಾಮಪತ್ರ ಸಲ್ಲಿಸಿದ್ದು, ಇವರ ನಾಮ ಪತ್ರವನ್ನು ಪಂಚಾಯತ್ ಸದಸ್ಯ ಡಿ.ಎಂ. ಮುಹಮ್ಮದ್ ಸೂಚಿಸಿ, ಲ್ಯಾನ್ಸಿ ಡಿಸೋಜ ಅನುಮೋದಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಎ)ಮೀಸಲಾತಿ ಪ್ರಕಾರ ಬಿಜೆಪಿಯಿಂದ 5ನೆ ವಾರ್ಡ್ ಸದಸ್ಯ ಅನಿಲ್ ಬಗಂಬಿಲ ನಾಮಪತ್ರ ಸಲ್ಲಿಸಿದ್ದು ಇವರ ನಾಮಪತ್ರವನ್ನು ಪಂಚಾಯತ್ ಸದಸ್ಯರಾದ ಧೀರಜ್ ಸೂಚಿಸಿ, ಪ್ರಶಾಂತ್ ಅನುಮೋದಿಸಿದ್ದರು. ಮತ್ತೋರ್ವ ಬಿಜೆಪಿ ಅಭ್ಯರ್ಥಿ 1ನೇ ವಾರ್ಡ್ ಸದಸ್ಯೆ ಭಾರತಿ ರಾಘವ ಗಟ್ಟಿ ನಾಮಪತ್ರ ಸಲ್ಲಿಸಿದ್ದು, ಸದಸ್ಯರಾದ ವಿದ್ಯಾ ಟಿ. ನಾರಾಯಣ್ ಸೂಚಿಸಿ, ಮೋಹನ್ ಬಲ್ಯ ಅನುಮೋದಿಸಿದ್ದರು. ಕಾಂಗ್ರೆಸ್‌ನಿಂದ ಉಪಾಧ್ಯಕ್ಷ ಸ್ಥಾನಕ್ಕೆ 12ನೆ ವಾರ್ಡ್ ಸದಸ್ಯರಾದ ಮೊಯ್ದಿನ್ ಕುಂಞಿ ನಾಮ ಪತ್ರ ಸಲ್ಲಿಸಿದ್ದು ಸದಸ್ಯರಾದ ಹಮೀದ್ ಹಸನ್ ಸೂಚನೆಯಂತೆ, ಮುಹಮ್ಮದ್ ಅನುಮೋದಿಸಿದ್ದರು.

ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಸಿ ನಾಮ ಪತ್ರ ಹಿಂಪಡೆಯಲು 5 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಈ ವೇಳೆ ಬಿಜೆಪಿಯ ಉಪಾಧ್ಯಕ್ಷೆ ಸ್ಥಾನದ ಆಕಾಂಕ್ಷಿ ಭಾರತಿ ರಾಘವ ಗಟ್ಟಿ ತಮ್ಮ ನಾಮಪತ್ರವನ್ನು ಹಿಂಪಡೆದರು.

17 ಪಟ್ಟಣ ಪಂಚಾಯತ್ ಸದಸ್ಯರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮಧ್ಯೆ ಚುನಾವಣಾಧಿಕಾರಿ ಎದುರಲ್ಲಿ ಕೈ ಎತ್ತುವ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ ನಡೆದು ಮೊದಲಿಗೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಉದಯ್ ಶೆಟ್ಟಿ ಅವರಿಗೆ ಸಂಸದ ನಳಿನ್ ಸೇರಿದಂತೆ ಒಟ್ಟು 12 ಮತಗಳು ಲಭಿಸಿದರೆ, ಕಾಂಗ್ರೆಸ್‌ನ ಹಮೀದ್ ಹಸನ್‌ಗೆ 5 ಮತಗಳು ಲಭಿಸಿದವು. ಎಸ್‌ಡಿಪಿಐನ ಸದಸ್ಯೆಯೋರ್ವರು ಯಾರಿಗೂ ಮತ ನೀಡದೆ ತಟಸ್ಥರಾಗಿ ಉಳಿದರು. ಉಪಾಧ್ಯಕ್ಷ ಸ್ಥಾನದ ಬಿಜೆಪಿ ಅಭ್ಯರ್ಥಿ ಅನಿಲ್ ಪರವಾಗಿಯೂ ಸಂಸದರೂ ಸೇರಿದಂತೆ 12 ಮತಗಳು ಲಭಿಸಿದವು. ಕಾಂಗ್ರೆಸ್‌ನ ಮೊಯ್ದಿನ್ ಕುಂಞಿ ಅವರಿಗೆ ಎಸ್‌ಡಿಪಿಐನ ಸದಸ್ಯೆ ಮತ್ತು ಸಿಪಿಐಎಂನ ಸದಸ್ಯೆಯ ಮತ ಸೇರಿದಂತೆ 6 ಮತಗಳು ಲಭಿಸಿದವು.

ಬಿಜೆಪಿ ಪರ ನಿಂತ ಬಂಡಾಯ ಸದಸ್ಯರು

ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಟಿಕೆಟ್ ವಂಚಿತರಾಗಿ ಬಂಡಾಯವಾಗಿ ಸ್ಪರ್ಧಿಸಿ ಜಯಗಳಿಸಿದ್ದ ಮೂರನೆ ವಾರ್ಡ್ ಮಾಡೂರು ಕ್ಷೇತ್ರದ ಸದಸ್ಯ ಲೋಹಿತ್ ಮತ್ತು 2 ನೆ ವಾರ್ಡ್ ಕಣೀರುತೋಟ ಕ್ಷೇತ್ರದ ಜಯಶ್ರೀ ಪ್ರಪುಲ್‌ದಾಸ್ ಬಿಜೆಪಿ ಪರವಾಗಿಯೇ ಮತಚಲಾಯಿಸಿದರು.

 ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಿವಶಂಕರಪ್ಪಉಪಸ್ಥಿತರಿದ್ದರು. ಪಂಚಾಯತ್ ಆಡಳಿತಾಧಿಕಾರಿ ಮಾಣಿಕ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತೇಜಮೂರ್ತಿ, ಸಂಸದ ನಳಿನ್ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಬೋಳಿಯಾರ್ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News