×
Ad

ಪುತ್ತೂರು: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಸಂಖ್ಯಾಮಿತಿ ಸಡಿಲಿಸಲು ಮನವಿ

Update: 2016-06-24 20:25 IST

ಪುತ್ತೂರು, ಜೂ.24: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ನಿಗದಿ ಪಡಿಸಿರುವ ಸಂಖ್ಯೆಯ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿ ಪುತ್ತೂರು ಉಪವಿಭಾಗಾಧಿಕಾರಿಗೆ ಮತ್ತು ಆರ್‌ಟಿಒಗೆ ಶುಕ್ರವಾರ ಮನವಿ ಸಲ್ಲಿಸಿರುವ ಪುತ್ತೂರು ತಾಲೂಕು ರಿಕ್ಷಾ ಚಾಲಕ- ಮಾಲಕರ ಸಂಯುಕ್ತ ಹೋರಾಟ ಸಮಿತಿಯ ಪದಾಧಿಕಾರಿಗಳು ಇದಕ್ಕೆ ತಪ್ಪಿದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಸೇವೆ ನೀಡದೆ ಒಂದು ದಿನ ಬಂದ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಾನ ಉದ್ದೇಶಗಳನ್ನು ಮುಂದಿಟ್ಟುಕೊಂಡು ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ರಚನೆಗೊಂಡಿದ್ದ ಬಿಎಂಎಸ್, ಸ್ನೇಹ ಸಂಗಮ, ಕೆಆರ್‌ಎಸ್, ಎಸ್‌ಡಿಟಿಯು ರಿಕ್ಷಾ ಚಾಲಕ - ಮಾಲಕ ಸಂಘಟನೆಗಳನ್ನೊಳಗೊಂಡ ರಿಕ್ಷಾ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿಯ ತುರ್ತು ಸಭೆ ಸಮಿತಿಯ ಅಧ್ಯಕ್ಷ ದಿಲೀಪ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಶಾಲಾ ಮಕ್ಕಳನ್ನು ಕರೆದೊಯ್ಯುವ ರಿಕ್ಷಾಗಳು ಆರು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬಾರದೆಂದು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕಡ್ಡಾಯ ಮಾಡಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಒಂದು ರಿಕ್ಷಾದಲ್ಲಿ 10 ಮಕ್ಕಳನ್ನು ಕರೆದೊಯ್ಯಲು ಅವಕಾಶ ನೀಡಬೇಕು. ಅದು ಸಾಧ್ಯವಿಲ್ಲದಿದ್ದರೆ 8ಕ್ಕಾದರೂ ಅವಕಾಶ ನೀಡಬೇಕು ಎಂದು ಮನವಿ ಮಾಡಲು ತೀರ್ಮಾನಿಸಲಾಯಿತು.

ಒಂದು ವೇಳೆ ಈ ಮನವಿಯಲ್ಲಿನ ಅಂಶಗಳನ್ನು ಈಡೇರಿಸದೇ ಇದ್ದರೆ ಸಂಯುಕ್ತ ಹೋರಾಟ ಸಮಿತಿಯು ಮತ್ತೆ ಸಭೆ ಸೇರಿ ಕಠಿಣ ನಿರ್ಧಾರ ಕೈಗೊಳ್ಳುವುದೆಂದೂ, ಒಂದು ದಿನ ಸಾಂಕೇತಿಕ ಬಂದ್ ಮಾಡಿ, ಆ ದಿನ ಶಾಲಾ ಮಕ್ಕಳನ್ನು ಕರೆದೊಯ್ಯದೆ ಪ್ರತಿರೋಧ ವ್ಯಕ್ತಪಡಿಸುವುದೆಂದು ಸಮಿತಿಯ ಅಧ್ಯಕ್ಷ ದಿಲೀಪ್ ತಿಳಿಸಿದರು. ಸಾಂಕೇತಿಕ ಬಂದ್ ಕೂಡ ಫಲ ನೀಡದೇ ಇದ್ದರೆ ಮುಂದೆ ಶಾಶ್ವತವಾಗಿ ರಿಕ್ಷಾ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ಕೆಲಸ ಕೈಬಿಟ್ಟರೂ ಅಚ್ಚರಿಯಿಲ್ಲ ಎಂದವರು ತಿಳಿಸಿದರು.

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಬಳಿಕ ಸಂಘಟನೆಯ ಪದಾಧಿಕಾರಿಗಳು ಪುತ್ತೂರು ಉಪವಿಭಾಗಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈಗಾಗಲೇ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾನೂನು ನಿಯಮ ಪಾಲನೆಗೆ ಜೂ.30ರ ಗಡುವು ನೀಡಲಾಗಿದೆ. ಪೊಲೀಸರು ಇದನ್ನು ರಿಕ್ಷಾ ಚಾಲಕರಿಗೆ ತಿಳಿಸಿದ್ದಾರೆ. ಜುಲೈ 1ರಿಂದ ರಿಕ್ಷಾದಲ್ಲಿ 6ಕ್ಕಿಂತ ಹೆಚ್ಚು ಮಕ್ಕಳು ಕಂಡು ಬಂದರೆ ಕೇಸ್ ಹಾಕುವುದಾಗಿ ತಿಳಿಸಿದ್ದಾರೆ. ಹೀಗಾದರೆ ರಿಕ್ಷಾ ಚಾಲಕರು ಆದಾಯ ಗಳಿಸುವುದು ಕಷ್ಟವಾಗಲಿದೆ. ಈ ಕಾರಣಕ್ಕಾಗಿ ಬಾಡಿಗೆ ಹೆಚ್ಚಳ ಮಾಡಿದರೆ ಹೆತ್ತವರ ಮೇಲೆ ಹೊರೆ ಬೀಳುತ್ತದೆ ಮತ್ತು ಮಕ್ಕಳ ಶಿಕ್ಷಣದ ಮೇಲೆ ಬರೆ ಬೀಳುತ್ತದೆ. ಈ ಕಾರಣದಿಂದ ಕಾನೂನಿನ ಜೊತೆಯಲ್ಲಿ ಮಾನವೀಯ ಕೋನಗಳನ್ನು ಗಮನಿಸಿಕೊಂಡು ಪುಟ್ಟ ಮಕ್ಕಳಾದರೆ ಒಂದು ರಿಕ್ಷಾದಲ್ಲಿ 10 ಮಕ್ಕಳನ್ನು ಕರೆದೊಯ್ಯಲು ಅವಕಾಶ ನೀಡಬೇಕು. ಅದು ಸಾಧ್ಯವಿಲ್ಲದಿದ್ದರೆ 8ಕ್ಕಾದರೂ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಮಿತಿಯ ಪ್ರಮುಖರಾದ ಜಯರಾಂ ಕುಲಾಲ್, ಶೇಷಪ್ಪ ನಾಯ್ಕ, ದಿನೇಶ್ ಮತ್ತಿತರರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತು ಆರ್‌ಟಿಒ ಫೆಲಿಕ್ಸ್ ಡಿಸೋಜರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News