×
Ad

‘555 ವಿದ್ಯಾರ್ಥಿಗಳಿಂದ ತೃತೀಯ ಭಾಷೆಯಾಗಿ ತುಳು ಕಲಿಕೆ’

Update: 2016-06-24 23:46 IST

ಉಡುಪಿ, ಜೂ.24: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಒಟ್ಟು 13 ವಿದ್ಯಾಸಂಸ್ಥೆಗಳಲ್ಲಿ 6ರಿಂದ 10ನೆ ತರಗತಿವರೆಗೆ 555 ವಿದ್ಯಾರ್ಥಿಗಳು ತುಳುವನ್ನು ತೃತೀಯ ಭಾಷೆಯಾಗಿ ಕಲಿಯುತ್ತಿದ್ದು, ಈ ಬಾರಿ ಎಸೆಸೆಲ್ಸಿಯ ಸುಮಾರು 223 ವಿದ್ಯಾರ್ಥಿಗಳು ತುಳು ವಿಷಯದಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಉಡುಪಿ ತುಳುಕೂಟ ಹಾಗೂ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ಪುಸ್ತಕ ಕಲಿಯುವಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ದ.ಕ. ಜಿಲ್ಲೆಯ 12 ಶಾಲೆಯ 6ನೆ ತರಗತಿಯಲ್ಲಿ 10, 7ನೆ ತರಗತಿಯಲ್ಲಿ 15, 8ನೆ ತರಗತಿಯಲ್ಲಿ 110, 9ನೆ ತರಗತಿಯಲ್ಲಿ 183, 10ನೆ ತರಗತಿಯಲ್ಲಿ 223 ಹಾಗೂ ಉಡುಪಿ ಜಿಲ್ಲೆಯ ಒಂದು ಶಾಲೆಯಲ್ಲಿ 14 ಮಕ್ಕಳು ತುಳು ಕಲಿಯುತ್ತಿದ್ದಾರೆ. ಕಳೆದ ಬಾರಿ 25 ಮಕ್ಕಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು, ಇವರು ತುಳು ವಿಷಯದಲ್ಲಿ 85ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮಾತನಾಡಿ, ತುಳುಭಾಷೆಯ ಕುರಿತು ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ. ಈ ಭಾಷೆಯಲ್ಲಿ ಸಾಕಷ್ಟು ಸತ್ವ ಅಡಗಿದೆ. ತುಳು ಪ್ರಾಚೀನ ಭಾಷೆ ಮಾತ್ರವಲ್ಲದೆ ದೊಡ್ಡ ಸಂಪತ್ತು ಹಾಗೂ ಶಕ್ತಿಯುತ ಭಾಷೆಯಾಗಿದೆ. ಇತರ ಭಾಷೆಗಳನ್ನು ಮಿಶ್ರ ಮಾಡದೆ ತುಳುವಿನಲ್ಲಿ ಮಾತನಾಡಲು ಸಾಧ್ಯವಿದೆ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ತುಳುಕೂಟದ ಉಪಾಧ್ಯಕ್ಷರಾದ ಮುಹಮ್ಮದ್ ವೌಲಾ, ವೀಣಾ ಶೆಟ್ಟಿ, ಯು.ಜೆ.ದೇವಾಡಿಗ, ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ್ ಅಂದ್ರಾದೆ ಉಪಸ್ಥಿತರಿದ್ದರು. ಅಕಾಡಮಿ ಸದಸ್ಯ ಯಾದವ್ ವಿ.ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿದರು. ತುಳುಕೂಟ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಉಪನ್ಯಾಸಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News