ಇಯು ಬಿಡಲು ಮತ ಹಾಕಿದ ಮೇಲೆ ಗೂಗಲ್ ನಲ್ಲಿ ಇಯು ಎಂದರೇನೆಂದು ಹುಡುಕಿದರು!
ಲಂಡನ್: ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬಗೆಗಿನ ಐತಿಹಾಸಿಕ ಜನಮತಗಣನೆ ಬಗ್ಗೆ ವಿಶ್ವಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬ್ರೆಕ್ಸಿಸ್ಟ್ ಪರ ಹೋರಾಟಗಾರರು ಗೆಲುವಿನ ಕೇಕೆ ಹಾಕುತ್ತಿದ್ದಾರೆ. ಆದರೆ ಬ್ರಿಟನ್ ನಾಗರಿಕರು ಮಾತ್ರ, ತಾವು ಯಾವ ಕಾರಣಕ್ಕೆ ಮತ ಹಾಕಿದ್ದೇವೆ ಎಂಬ ಬಗ್ಗೆ ಗೂಗಲ್ ನಲ್ಲಿ ಹುಡುಕಾಡುತ್ತಿದ್ದಾರೆ!
ಲಂಡನ್ ಸ್ಟಾಕ್ ಮಾರ್ಕೆಟ್ ಪ್ರಪಾತಕ್ಕೆ ಕುಸಿದು, ಪೌಂಡ್ ಸ್ಟೆರ್ಲಿಂಗ್ ಬೆಲೆ ಪಾತಾಳಕ್ಕೆ ಇಳಿದ ಬಳಿಕ ಬ್ರಿಟಿಷರು 30 ವರ್ಷದಲ್ಲಿ ಕಂಡರಿಯದ ಕುಸಿತದಿಂದ ಕಂಗೆಟ್ಟಿದ್ದಾರೆ. ಇಂಗ್ಲಿಷರಿಗೆ ತಡವಾಗಿ ಜ್ಞಾನೋದಯವಾಗಿದೆ. ಬ್ರಿಟನ್ ನ ಈ ಐತಿಹಾಸಿಕ ನಿರ್ಧಾರ ಆರ್ಥಿಕ ದಿಗ್ಭ್ರಮೆಗೆ ಕಾರಣವಾಗಲಿದ್ದು, ಸದ್ಯಕ್ಕಂತೂ ಸುಧಾರಿಸಲಾರದಷ್ಟು ಹದಗೆಡಲಿದೆ ಎಂಬ ವಿಶ್ಲೇಷಣೆಗಳು ಅವರನ್ನು ಕಂಗೆಡಿಸಿವೆ. ವಿಶ್ವಾದ್ಯಂತ ಅದರ ಪರಿಣಾಮಗಳು ಕಂಡುಬರುತ್ತಿವೆ. ಅಮೆರಿಕ ಹಾಗೂ ಕೆಲ ಮಂದಿ ಬ್ರಿಟಿಷರು ಕೂಡಾ ಇದೀಗ ಬ್ರೆಕ್ಸಿಸ್ಟ್ ಪರವಾಗಿ ಮತಹಾಕಿದ ತಪ್ಪಿಗೆ ಪ್ರಾಯಶ್ಚಿತಪಡುತ್ತಿದ್ದಾರೆ.
"ನಾನು ಬ್ರೆಕ್ಸಿಸ್ಟ್ ಪರ ಮತ ಹಾಕಿದ್ದರೂ, ವಾಸ್ತವವಾಗಿ ಅದು ನನಗೆ ಏನು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಈಗ ಎಚ್ಚೆತ್ತುಕೊಂಡಿದ್ದೇನೆ" ಎಂದು ಮಹಿಳೆಯೊಬ್ಬರು ಐಟಿವಿ ನ್ಯೂಸ್ ಚಾನಲ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ನನಗೆ ಮತಹಾಕಲು ಅವಕಾಶ ನೀಡಿದರೆ, ನಾನು ಒಕ್ಕೂಟದಲ್ಲೇ ಉಳಿಯುವ ಪರ ಮತ ಹಾಕುತ್ತೇನೆ" ಎಂದು ಹೇಳಿದ್ದಾರೆ.
ಬ್ರಿಟನ್ ನಲ್ಲಿ ಹಾಗೂ ಇತರೆಡೆಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿರುವುದರಿಂದ ಆತಂಕಕ್ಕೀಡಾದ ಜನ ಗೂಗಲ್ ನಲ್ಲಿ, ಭವಿಷ್ಯದ ಪರಿಣಾಮಗಳ ಬಗ್ಗೆ ಜಾಲಾಡುತ್ತಿರುವುದು ಕಂಡುಬಂದಿದೆ. ಮತ ಹಾಕಿದ ಎಂಟು ಗಂಟೆಗಳ ಬಳಿಕ ಹಲವು ಮಂದಿ, "ಇಯು ತೊರೆದರೆ ಏನಾಗುತ್ತದೆ" ಎಂಬ ಬಗ್ಗೆ ಜಾಲಾಡಿದ್ದಾರೆ ಎಂದು ಗೂಗಲ್ ಹೇಳಿದೆ.