×
Ad

ದುಬೈಯಲ್ಲಿ ಪ್ರವಾಸಿಗ ನಿಧನ, ಸಂಕಷ್ಟದಲ್ಲಿ ಭಾರತೀಯ ಕುಟುಂಬ

Update: 2016-06-25 16:22 IST

ದುಬೈ: ದುಬೈ ಪ್ರವಾಸದ ವೇಳೆ ಅಸೌಖ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟು ನಂತರ ಸಾವನ್ನಪ್ಪಿದ್ದ ವ್ಯಕ್ತಿಯೊಬ್ಬರ ಕುಟುಂಬ  ಅವರ ಆಸ್ಪತ್ರೆ ಬಿಲ್ ಪಾವತಿಸಲು ಅಸಮರ್ಥವಾಗಿದೆಯಲ್ಲದೆ, ದುಬೈಯಲ್ಲಿರುವ ಸ್ವದೇಶೀಯರ  ಸಹಾಯ ಯಾಚಿಸಿದೆ. ಮೃತ ಪಟ್ಟ ವ್ಯಕ್ತಿ ವಿಸಿಟ್ ವೀಸಾದಲ್ಲಿ ಪ್ರವಾಸದಲ್ಲಿದ್ದು ಪ್ರವಾಸ ವಿಮೆ ಕೂಡ ಹೊಂದಿಲ್ಲವೆನ್ನಲಾಗಿದೆ.

ಲೂಯಿಸ್ ಮೇನ್ಯುವೆಲ್ (69) ಮೃತಪಟ್ಟ ವ್ಯಕ್ತಿಯಾಗಿದ್ದು 22 ದಿನಗಳ ಆಸ್ಪತ್ರೆ ಬಿಲ್ 197,000 ದಿರಮ್ಸ್ ಆಗಿದ್ದರೆ ಅವರ ಕುಟುಂಬ ಇಲ್ಲಿಯ ತನಕ 36000 ದಿರಮ್ಸ್ ಪಾವತಿಸಿದೆ. ಆಸ್ಪತ್ರೆ ಸ್ವಲ್ಪ ರಿಯಾಯಿತಿ ನೀಡಿದ್ದರೂ, ಕುಟುಂಬ 126,000 ದಿನಾರ್ ಇನ್ನೂ ಪಾವತಿಸಬೇಕಾಗಿದೆ.

ಮೇನ್ಯುವೆಲ್ ಮುಂಬೈನಿಂದ ತನ್ನ ಪತ್ನಿ, ಪುತ್ರ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ದುಬೈಗೆ ಆಗಮಿಸಿದಾಗ ಉತ್ತಮ ಆರೋಗ್ಯದಿಂದಿದ್ದು ಉಚಿತ ಟಿಕೆಟ್ ಮೇಲೆ ಅವರ ಕುಟುಂಬ ದುಬೈ ಪ್ರವಾಸ ಹೊರಟಿತ್ತು. ಕಳೆದ ಬಾರಿ ಮೇನ್ಯುವೆಲ್ ಕುಟುಂಬ ದುಬೈಗೆ ಅವರ ಸೋದರ ಸೊಸೆ ವಿವಾಹಕ್ಕೆ ಆಗಮಿಸಿದ್ದಾಗ  ವಿಮಾನದಲ್ಲಿ ನಿಗದಿತ ಸೀಟಿಗಿಂತ ಹೆಚ್ಚಿನ ಸೀಟು ಮುಂಗಡ ಕಾದಿರಿಸಲಾಗಿತ್ತು. ಏರ್ ಲೈನ್ ಸಂಸ್ಥೆ ಈ ಪ್ರಮಾದವನ್ನು ಸರಪಡಿಸಲು ಕುಟುಂಬಕ್ಕೆ ಉಚಿತ ಟಿಕೆಟ್ ನೀಡಿದ್ದು ಅದನ್ನು ಉಪಯೋಗಿಸಿ ಕುಟುಂಬ ದುಬೈ ಪ್ರವಾಸಕ್ಕೆ ಹೊರಟಿತ್ತು.

ಮೇನ್ಯುವೆಲ್ ಕ್ರೋನಿಕ್ ಒಬ್ಸ್ಟಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)ನಿಂದ ಬಳಲುತ್ತಿದ್ದರೂ  ಅದು ನಿಯಂತ್ರಣದಲ್ಲಿತ್ತೆನ್ನಲಾಗಿದೆ. ಪ್ರವಾಸದ ವೇಳೆ ಅವರಿಗೆ ಮೊದಲು ಸಣ್ಣದಾಗಿ ಜ್ವರ ಕಾಣಿಸಿಕೊಂಡಿದ್ದರೆ ನಂತರ  ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದಾರೆಂದು ಹೇಳಿದ್ದರೆನ್ನಲಾಗಿದ್ದು ದಿನ ಕಳೆದಂತೆ ಆಸ್ಪತ್ರೆಯ ಬಿಲ್ ಹೆಚ್ಚುತ್ತಾ ಹೋಗಿತ್ತು. ಅವರಿಗೆ ನೀಡಲಾಗುತ್ತಿದ್ದ ಕೆಲವು ಔಷಧಿಗಳಿಂದಾಗಿ ಅವರನ್ನು ಮತ್ತೆ ಸ್ವದೇಶಕ್ಕೆ ವಿಮಾನದಲ್ಲಿ ಕರೆದೊಯ್ಯುವ ಹಾಗಿರಲೂ ಇಲ್ಲ ಹಾಗೂ  ಬೇರೆ ಆಸ್ಪತ್ರೆ ಕೂಡ ಅವರನ್ನು ದಾಖಲಿಸಲು ನಿರಾಕರಿಸಿದ್ದ ಕಾರಣ ಅನಿವಾರ್ಯವಾಗಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕಾಗಿ ಬಂದಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News